ಯೂರೋಪಿನಲ್ಲಿ ಧಗೆಯಿಂದ ಹಾಹಾಕಾರ, ಚೀನಾದಲ್ಲಿ ಬರಗಾಲ, ಭಾರತದಲ್ಲಿ ಅತಿವೃಷ್ಟಿಯ ಜಲಧಾರೆ, ಅಮೇರಿಕಾದಲ್ಲಿ ಹಿಮದ ಮಳೆ: ಇದು ಜಾಗತಿಕ ಹವಾಮಾನ ಬದಲಾವಣೆಯ ಕಾಲ

ಒಂದೆಡೆ ಸದಾ ತಣ್ಣಗಿರುತ್ತಿದ್ದ ಯೂರೋಪಿನ ದೇಶಗಳಲ್ಲಿ ತಾಪಮಾನ 35 ಡಿಗ್ರಿ ಹೆಚ್ಚಾಗಿ ಜನ ಬೇಸಗೆಯ ಧಗೆಯಿಂದ ಹೈರಾಣಾಗುತ್ತಿದ್ದರೆ ಇತ್ತ ನೈರುತ್ಯ ಚೀನಾದಲ್ಲಿ ಜುಲೈ ಮಾಹೆಯಲ್ಲಿ ಪ್ರವಾಹವಿರಬೇಕಾದಲ್ಲಿ ಭಯಂಕರ ಬರಗಾಲ ತಾಂಡವವಾಡುತ್ತಿದೆ. ಬ್ರಿಟನ್ನಿನಲ್ಲಿ ಈಗಾಗಾಲೇ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನವು ದಾಖಲೆಯ 40ಡಿಗ್ರಿ ಮಾಪನವನ್ನು ತಲುಪಲಿದೆ ಎನ್ನಲಾಗಿದೆ. ಫ್ರಾನ್ಸ್ ಇಟಲಿಯ ಕಾಡುಗಳನ್ನು ಬೆಂಕಿಯ ಕೆನ್ನಾಲಿಗೆ ಆವರಿಸಿಕೊಂಡಿದೆ.

ಇಟಲಿಯಲ್ಲಿ 70 ವರ್ಷಗಳ ಬಳಿಕ ಬರಗಾಲ ಕಂಡು ಬಂದಿದೆ. ಅಮೇರಿಕಾದಲ್ಲಿ ಮರಳಿನ ತೂಫಾನು ಆವರಿಸಿಕೊಂಡು ಹೈವೆಯಲ್ಲಿ ವಾಹನಗಳು ಸಂಚರಿಸಲೂ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯನ್ನೆಲ್ಲಾ ಮರಳಿನ ಧೂಳು ಆವರಿಸಿದ್ದರಿಂದ ವಹನಗಳು ಒಂದಕ್ಕೊಂದು ಢಿಕ್ಕಿ ಹೊಡೆದಿವೆ. ದಕ್ಷಿಣ ಆಮೇರಿಕಾದಲ್ಲಿ ಹಿಮದ ತೂಫಾನಿಂದಾಗಿ ಗಾಡಿಗಳ ಚಕ್ರಗಳೆಲ್ಲಾ ಹಿಮದಡಿ ಹೂತು ಹೋಗಿವೆ. ಇನ್ನು ಭಾರತದ ಸ್ಥಿತಿ ನೋಡಿದರೆ, ದೇಶದ ಬಹುತೇಕ ರಾಜ್ಯಗಳು ಅತಿವೃಷ್ಟಿಯ ಅಬ್ಬರದಿಂದ ಕೊಚ್ಚಿ ಹೋಗಿವೆ.

ಇವಕ್ಕೆಲ್ಲಾ ಕಾರಣ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ. ಇಂತಹ ಒಂದು ಸ್ಥಿತಿ ಉದ್ಭವವಾಗಬಹುದೆಂದು ಜಗತ್ತಿನಾದ್ಯಂತದ ವಿಜ್ಞಾನಿಗಳು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಬದಲಾಗುತ್ತಿರುವ ಹವಾಮಾನಕ್ಕೆ ಭೂಮಿಯ ಚಲನೆಯೂ ಕಾರಣ ಅಂತೆಯೆ ಮಾನವ ನಿರ್ಮಿತ ಹಸಿರು ಮನೆ ಪರಿಣಾಮವೂ ಕಾರಣ. ಕಾರ್ಖಾನೆ ವಾಹನಗಳು ಮನೆಯ ಫ್ರಿಡ್ಜ್ ಎಸಿಗಳಿಂದ ಉತ್ಸರ್ಜನೆಯಾಗುವ ಇಂಗಾಲಾಮ್ಲದಿಂದಾಗಿ ಜಾಗತಿಕ ತಾಪಮಾನ ದಿನೇ ದಿನೇ ಏರುತ್ತಿದ್ದು, ಇದನ್ನು ಕಡಿಮೆ ಮಾಡುವ ಯಾವ ಪರಿಹಾರವೂ ಕೂಡಾ ಮುಂದುವರಿದ ದೇಶ ಸೇರಿದಂತೆ ಅಭಿವೃದ್ದಿ ಶೀಲ ದೇಶಗಳ ಬಳಿಯೂ ಇಲ್ಲವೆಂಬಂತಾಗಿದೆ.

ಭೂಮಿಯ ದೈನಂದಿನ ಚಲನೆ ಮತ್ತು ಸೂರ್ಯನ ಸುತ್ತ ಸುತ್ತುವ ವಾರ್ಷಿಕ ಚಲನೆಯಿಂದಾಗಿಯೂ ಋತು ಮತ್ತು ಹವಾಮಾನ ಬದಲಾವಣೆಗಳಾಗುತ್ತವೆ. ವಿಜ್ಞಾನಿಗಳ ಪ್ರಕಾರ ಭೂಮಿ ಈಗ ಶೀತಲಯುಗವನ್ನು ಪ್ರವೇಶಿಸುವ ಘಟ್ಟದಲ್ಲಿರಬೇಕು. ಅಂದರೆ ಭೂಮಿಯ ಮೇಲೆ ಹಿಮಪದರಗಳು ನಿರ್ಮಾಣವಾಗುವ ಈ ಹೊತ್ತಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ಹಿಮಗಳು ಕರಗುತ್ತಿವೆ. ಇದರಿಂದಾಗಿ ಮುಂದಿನ ಕೆಲವೇ ವರ್ಷಗಳಲ್ಲಿ ಸಮುದ್ರ ಕರಾವಳಿಯ ಬಹುತೇಕ ನಗರಗಳು ಮುಳುಗಲಿವೆ ಎಂದು ವಿಜ್ಞಾನಿಗಳು ಈಗಾಗಲೇ ಅಂದಾಜಿಸಿದ್ದಾರೆ.

ಪ್ರಕೃತಿಯಲ್ಲಾಗುತ್ತಿರುವ ಈ ಬದಲಾವಣೆಗಳಿಂದ ಬೆಳೆಗಳ ಮೇಲೂ ಪ್ರಭಾವ ಬೀಳುತ್ತಿದ್ದು, ತಿನ್ನುವ ಅನ್ನಕ್ಕೂ ತತ್ವಾರ ಬರಲಿದೆ ಎನ್ನಲಾಗಿದೆ. ತಾಪಮಾನದಲ್ಲಿ 5 ಡಿಗ್ರಿ ಏರಿಕೆ ಕಂಡುಬಂದರೂ 30% ಬೆಳೆ ನಾಶವಾಗುತ್ತದೆ. ಇನ್ನು ಅತಿವೃಷ್ಟಿಯಿಂದ ಈಗಾಗಲೇ ಬೆಳೆಗಳು ನಾಶವಾಗಿದ್ದು, ಎಲ್ಲವನ್ನೂ ಮತ್ತೊಮ್ಮೆ ಬಿತ್ತುವಂತಹ ಸ್ಥಿತಿ ಉದ್ಭವಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಆಹಾರದ ಕೊರತೆಯೂ ಕಾಣಿಸಿಕೊಳ್ಳಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.