ಬಾಲ್ಯದಲ್ಲೇ ಉದ್ಯಮಿಗಳಾದ ಅಪ್ಪಟ ಗ್ರಾಮೀಣ ಪ್ರತಿಭೆಗಳು

ಬೆಳಗಾವಿ : ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಕತ್ರಿದಡ್ಡಿ ಗ್ರಾಮದ ಆರು ವಿದ್ಯಾರ್ಥಿಗಳು ತಮ್ಮ ಸಮಸ್ಯೆಗೆ ತಾವೇ ಪರಿಹಾರ ಹುಡುಕಿಕೊಂಡಿದ್ದಾರೆ.ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಕತ್ರಿದಡ್ಡಿ ಗ್ರಾಮದ ಆರು ವಿದ್ಯಾರ್ಥಿಗಳು ತಮ್ಮ ಸಮಸ್ಯೆಗೆ ತಾವೇ ಪರಿಹಾರ ಹುಡುಕಿಕೊಂಡಿದ್ದಾರೆ. ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಎಂಬುದು ಇದ್ದೇ ಇರುತ್ತದೆ.

ಹೌದು, ಈ ಸಾಧನೆ ಮಾಡಿರುವ ಆರು ವಿದ್ಯಾರ್ಥಿಗಳು ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಕತ್ರಿದಡ್ಡಿ ಗ್ರಾಮದವರು. 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಹೊಸ ಅನ್ವೇಷಣೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಕತ್ರಿದಡ್ಡಿ ಗ್ರಾಮದಲ್ಲಿ ಪದೇ ಪದೇ ವಿದ್ಯುತ್ ಸ್ಥಗಿತವಾಗುತ್ತಿತ್ತು. ಅಲ್ಲದೇ ತಂದೆ-ತಾಯಿ ಕೃಷಿಕರಾಗಿದ್ದರಿಂದ ದಿನಪೂರ್ತಿ ಕೆಲಸ ಮಾಡಿ ಬಂದು, ರಾತ್ರಿ ವೇಳೆ ಊಟ ಮಾಡಿ ಲೈಟ್ ಆಫ್ ಮಾಡಿ ಮಲಗಿ ಬಿಡುತ್ತಿದ್ದರು. ಇದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆ ಆಗುತ್ತಿತ್ತು.ನಾವು ಪರಿಹಾರವನ್ನು ಹುಡುಕುವ ಮನಸು ಮಾಡಬೇಕು ಅಷ್ಟೇ. ಇದಕ್ಕೆ ಉದಾಹರಣೆ ಎಂಬಂತೆ ಬೆಳಗಾವಿ ವಿದ್ಯಾರ್ಥಿಗಳು ವಿದ್ಯುತ್ ವ್ಯತ್ಯಯದಿಂದ ಓದು ಬರಹಕ್ಕೆ ತೊಂದರೆ ಆಗುತ್ತಿದ್ದರೂ ಸಹಾ ಕೈಕಟ್ಟಿ ಕೂರದೇ ಸ್ವತಃ ತಾವೇ ಲೈಟ್ ಪೆನ್ ಕಂಡು ಹಿಡಿಯುವ ಮೂಲಕ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಬಾಲ್ಯದಲ್ಲೇ ಇಂತಹ ಕ್ರಿಯಾತ್ಮಕ ಕೆಲಸದಿಂದ ಉದ್ಯಮಿಗಳಾಗುವತ್ತ ಹೆಜ್ಜೆ ಇಟ್ಟಿದ್ದಾರೆ.

ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ವಿದ್ಯಾರ್ಥಿಗಳಾದ ಸುದೀಪ್​ ಹತ್ತಿ ಮತ್ತು ನವೀನ ದೊಡವಾಡ, ಶಿಕ್ಷಕರು ನಮಗೆ ಹೋಮ್ ವರ್ಕ್ ಕೊಟ್ಟಿರುತ್ತಾರೆ. ಮನೆಯಲ್ಲಿ ವಿದ್ಯುತ್ ಹೋದರೆ ಅಭ್ಯಾಸ ಮಾಡಲು ಆಗೋದಿಲ್ಲ. ಹಾಗೇ ಹೋದರೆ ಶಿಕ್ಷಕರು ನಮಗೆ ಬೈಯುತ್ತಾರೆ. ಹೀಗಾಗಿ ಏನಾದರು ಮಾಡಬೇಕೆಂದು ಲೈಟ್ ಪೆನ್ ಕಂಡು ಹಿಡಿದಿದ್ದೇವೆ. ಇದಕ್ಕೆ ಎರಡು ಲೈಟ್ ಅಳವಡಿಸಿದ್ದೇವೆ. ಸಿ ಪಿನ್ ಚಾರ್ಜರ್, ರಿಚಾರ್ಜೆಬಲ್ ಬ್ಯಾಟರಿ, ಎರಡು ಎಲ್‌ಇಡಿ, ವೈರ್, ರಿಜಿಸ್ಟರ್, 3ಡಿ ಪಿನ್ ಬಾಕ್ಸ್​ನಿಂದ ಈ ಪೆನ್ ಕಂಡು ಹಿಡಿದಿದ್ದೇವೆ ಎಂದು ವಿವರಿಸಿದರು. ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ್ದೇವೆ. ಇನ್ನಷ್ಟು ಹೊಸ ಸಂಶೋಧನೆ ಕೈಗೊಳ್ಳುವ ಯೋಜನೆ ಹಾಕಿಕೊಂಡಿದ್ದು, ಮುಂದೆ ನಮ್ಮ ಜೀವನದಲ್ಲಿ ಬರುವ ತೊಂದರೆಗಳಿಗೆ ಪರಿಹಾರ ಕಂಡು ಹಿಡಿಯುತ್ತೇವೆ ಎಂದು ವಿದ್ಯಾರ್ಥಿ ಸುದೀಪ್ ಹತ್ತಿ ತನ್ನ ಕನಸನ್ನು ಬಿಚ್ಚಿಟ್ಟ.

ಗಮನಿಸಿದ ವಿದ್ಯಾರ್ಥಿಗಳಾದ ಸುದೀಪ ಹತ್ತಿ, ಸುನೀಲ ಮಾಶೇವಾಡಿ, ಗಂಗಪ್ಪ ಹಿಗಣಿ, ಸುದೀಪ ತೋಪಗಾನಿ, ನವೀನ ದೊಡವಾಡ, ಪ್ರೇಮಕುಮಾರ ಹಟ್ಟಿಹೊಳಿ ಎಂಬ ಆರು ವಿದ್ಯಾರ್ಥಿಗಳು ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡು ಹಿಡಿಯಬೇಕೆಂದು ನಿಶ್ಚಯಿಸಿದ್ದರು. ಬಳಿಕ ಎಲ್ಲರೂ ಒಟ್ಟಿಗೆ ಲೈಟ್ ಪೆನ್ ಅನ್ವೇಷಣೆ ಮಾಡಿದ್ದಾರೆ. ಇದರಿಂದ ಕತ್ತಲಿನಲ್ಲೂ ಸರಳವಾಗಿ ಓದು ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಸಣ್ಣ ವಯಸ್ಸಿನಲ್ಲೇ ಉದ್ಯಮಿಗಳಾಗಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾರೆ.
ಹೂಡಿಕೆಗೆ ಮುಂದಾದ ಎಜ್ಯುಕೇಷನ್​ ಇಂಡಿಯಾ ಸಂಸ್ಥೆ: ಈ ವಿದ್ಯಾರ್ಥಿಗಳಲ್ಲಿನ ಕೌಶಲ್ಯ ಗುರುತಿಸಿರುವ ಎಜ್ಯುಕೇಷನ್ ಇಂಡಿಯಾ ಮತ್ತು ಧಾರವಾಡದ ಸುಕೃತಿ ಮಂತ್ರ ಸಂಸ್ಥೆ ಇವರ ಬೆನ್ನಿಗೆ ನಿಂತಿದ್ದು, ವಿದ್ಯಾರ್ಥಿಗಳು ತಯಾರಿಸಲು ಯೋಜಿಸಿರುವ 10 ಸಾವಿರ ಪೆನ್​ಗಳ‌ ಖರೀದಿಗೆ ಎಜ್ಯುಕೇಷನ್ ಇಂಡಿಯಾ ಸಂಸ್ಥೆ 20 ಲಕ್ಷ ರೂ. ಹೂಡಿಕೆ ಮಾಡಲು ಮುಂದೆ ಬಂದಿದೆ.

 

ಸುಕೃತಿ ಮಂತ್ರ ಸಂಸ್ಥೆಯ ಸದಸ್ಯ ಆನಂದ ಕಡಕೋಳ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಬಹಳಷ್ಟು ಪ್ರತಿಭೆ ಇರುತ್ತದೆ. ಏನಾದರು ಸಾಧಿಸಬೇಕೆಂಬ ಹಂಬಲ ಇರುತ್ತದೆ. ಆದರೆ ಅದಕ್ಕೆ ಸೂಕ್ತ ಅವಕಾಶ ಸಿಕ್ಕಿರುವುದಿಲ್ಲ. ಹೀಗಾಗಿ ಈ ವಿದ್ಯಾರ್ಥಿಗಳಲ್ಲಿ ಕೌಶಲ ಇಲ್ಲಿಯೇ ಕೊನೆ ಆಗಬಾರದೆಂದು, ವಿದ್ಯಾರ್ಥಿಗಳಿಗೆ ನಾವು ಕೈ ಜೋಡಿಸಿದ್ದೇವೆ. ಶಾಲೆ ಹುಡುಗರ ಮೇಲೆ ಈ ರೀತಿ ಹೂಡಿಕೆ ಮಾಡಿದ್ದು ಬಹುಶಃ ದೇಶದಲ್ಲೇ ಮೊದಲು. ಏಜುಕೇಶನ್ ಇಂಡಿಯಾ ಈ ರೀತಿಯ ಪ್ರಯೋಗಕ್ಕೆ ಮುಂದಾಗಿದ್ದು, ಈ ಉದ್ಯಮಕ್ಕೆ ವಿದ್ಯಾರ್ಥಿಗಳೇ ಮಾಲೀಕರು ಎಂದು ಹೇಳಿದರು

ಎಜ್ಯುಕೇಷನ್‌ ಇಂಡಿಯಾ ಸಂಸ್ಥೆಯ ಮ್ಯಾನೇಜರ್ ಕಾಶಿನಾಥ ಮಾತನಾಡಿ, ಹೊಸ ಸ್ಟಾರ್ಟಪ್‌ಗಳು ಮತ್ತು ಉದಯೋನ್ಮುಖ ಉದ್ಯಮಿಗಳನ್ನು ಬೆಂಬಲಿಸಲು ಬೆಳಗಾವಿಯಲ್ಲಿ ಕಳೆದ ತಿಂಗಳು ಮೇಳ ಆಯೋಜಿಸಿದ್ದೆವು. ಇದರಲ್ಲಿ ಭಾಗವಹಿಸಿದ್ದ ಕತ್ರಿದಡ್ಡಿಯ ವಿದ್ಯಾರ್ಥಿಗಳು ಸಿದ್ಧಪಡಿಸಿದ ಈ ಸಾಧನ ಗಮನ ಸೆಳೆಯಿತು. ಇದರಿಂದ ಹಳ್ಳಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಹುದಾದ ಈ ಸಾಧನದ ಸಂಶೋಧನೆ, ಅಭಿವೃದ್ಧಿ ಮತ್ತು ಮಾರುಕಟ್ಟೆ ಚಟುವಟಿಕೆಗೆ ‘ಎಜ್ಯುಕೇಷನ್‌ ಇಂಡಿಯಾ’ ಸಂಸ್ಥೆಯಿಂದ 20 ಲಕ್ಷ ನೆರವು ಒದಗಿಸಿದ್ದೇವೆ. 10 ಸಾವಿರ ಪೆನ್‌ಗಳ ಖರೀದಿಗೆ ಬೇಡಿಕೆ ಸಲ್ಲಿಸಿದ್ದೇವೆ. ಅವುಗಳನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
.