ಉಡುಪಿ: ವೆಂಟನಾ ಫೌಂಡೇಶನ್ ವತಿಯಿಂದ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಕೊಡುಗೆಯಾಗಿ ನೀಡಿರುವ 15 ಕೆವಿ ಜನರೇಟರ್ ಹಸ್ತಾಂತರಿಸುವ ಕಾರ್ಯಕ್ರಮವು ಅಕ್ಟೋಬರ್ 16 ರಂದು ನಡೆಯಿತು.
ಉಡುಪಿಯ ಮಾಹಿತಿ ತಂತ್ರಜ್ಞಾನದ ದಿಗ್ಗಜ ಸಂಸ್ಥೆ 99ಗೇಮ್ಸ್ ಆನ್ ಲೈನ್ ಪ್ರೈ. ಲಿ. ನ ಉಪಾಧ್ಯಕ್ಷೆ ಹಾಗೂ ವೆಂಟನಾ ಫೌಂಡೇಶನ್ ನ ಟ್ರಸ್ಟಿ ಶಿಲ್ಪಾ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ರೋಹಿತ್ ಭಟ್ ಅವರ ನೇತೃತ್ವದ ವೆಂಟನಾ ಫೌಂಡೇಶನ್ ಸಮಾನ ಮನಸ್ಕರೊಂದಿಗೆ ಆರಂಭಗೊಂಡಿದ್ದು, ಅದರ ಮೂಲಕ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ ಮೂಲ ಸೌಕರ್ಯವನ್ನು ಒದಗಿಸುವುದು ಮುಖ್ಯ ಉದ್ದೇಶ.
ಪರಿಸರ ಹಾಗೂ ಜಲ ಸಂರಕ್ಷಣೆ ವಿಭಾಗದಲ್ಲಿ ಕೆರೆಯ ಸ್ವಚ್ಚತೆ, ಗಿಡಗಳನ್ನು ಬೆಳೆಸಿ ಕಾಡಿನ ನಿರ್ಮಾಣ, ಕಲೆ, ಸಂಸ್ಕೃತಿಯ ಉಳಿವು ಮುಂತಾದವುಗಳಿಗೆ ಆರ್ಥಿಕ ಸಹಾಯ ನೀಡುವುದನ್ನು ಮುಂದುವರಿಸಲಿದ್ದೇವೆ. ಈ ನಿಟ್ಟಿನಲ್ಲಿ ಕರಾವಳಿ ಕರ್ನಾಟಕದ ಯಕ್ಷಗಾನದ ಉಳಿವಿಗಾಗಿ ಗೊಂಬೆಯಾಟದಂತಹ ಪ್ರಾಕಾರದ ಮೂಲಕ ವಿಶಿಷ್ಠ ರೀತಿಯಲ್ಲಿ ಶ್ರಮಿಸುತ್ತಿರುವ ಈ ಅಕಾಡೆಮಿಗೆ ಅಗತ್ಯವಿರುವ ಜನರೇಟರ್ ಅನ್ನು ಕೊಡುಗೆಯಾಗಿ ನೀಡಿದ್ದೇವೆ. ಗ್ರಾಮೀಣ ಭಾಗದಲ್ಲಿರುವ ಈ ಅಕಾಡೆಮಿ ದೇಶ ವಿದೇಶಗಳಲ್ಲಿ ಯಕ್ಷಗಾನ ಗೊಂಬೆಯಾಟ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ಮುಂದಿನ ದಿನಗಳಲ್ಲಿ ಅಕಾಡೆಮಿ ಕಡೆಯಿಂದ ಹೆಚ್ಚು ಕಾರ್ಯಕ್ರಮ ನಡೆಯಲಿ. ಗೊಂಬೆಯಾಟಕ್ಕೆ ಸಂಬಂಧಿಸಿದ ಎಲ್ಲಾ ಪ್ರಾಕಾರದಲ್ಲಿ ಕೆಲಸ ನಡೆದು ಇನ್ನಷ್ಟು ಪ್ರಖ್ಯಾತಿ ಹೊಂದಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಕುಂದಪ್ರಭ ವಾರಪತ್ರಿಕೆಯ ಸಂಪಾದಕ ಯು.ಎಸ್. ಶೆಣೈ, ಟ್ರಸ್ಟಿ ರವೀಂದ್ರ ರಾವ್, ಸದಸ್ಯೆ ಶೈಲಜಾ ರಾವ್, ಸ್ವಯಂಸೇವಕ ವಿಘ್ನೇಶ್ ಶೇಟ್ ಉಪಸ್ಥಿತರಿದ್ದರು.
ಅಕಾಡೆಯ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ನಾಗೇಶ ಶಾನುಭಾಗ್ ಬಂಟ್ವಾಡಿ ನಿರ್ವಹಿಸಿದರು. ಉದಯ ಭಂಡಾರ್ಕಾರ್ ವಂದಿಸಿದರು.