ಸದನದಲ್ಲಿ ಹಿಂದಿನ ವರ್ಷದ ಬಜೆಟ್ ಓದಿದ ಅಶೋಕ್ ಗೆಹ್ಲೋಟ್: ಬಜೆಟ್ ಮೊದಲೆ ಸೋರಿಕೆಯಾಗಿದೆಯೆ ಎಂದ ಪ್ರತಿಪಕ್ಷ

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶುಕ್ರವಾರದಂದು ಸದನದಲ್ಲಿ ಹಳೆ ಬಜೆಟ್ ಅನ್ನು ಏಳು ನಿಮಿಷಗಳ ಕಾಲ ಓದಿದ್ದು, ಆ ಬಳಿಕ ಮುಖ್ಯ ಸಚೇತಕ ಅವರನ್ನು ಎಚ್ಚರಿಸಿದ್ದು, ತಪ್ಪಿನ ಅರಿವಾಗಿ ಸದನದ ಕ್ಷಮೆ ಕೇಳಿದ್ದಾರೆ.

ಗೆಹ್ಲೋಟ್ ಸರಕಾರದಿಂದ ಪ್ರಮಾದವಾಗಿದೆ, ಬಜೆಟ್ ಕೂಡಾ ಇತರ ಪೇಪರ್ ಗಳಂತೆ ಮೊದಲೇ ಸೋರಿಕೆ ಆಗಿದೆ ಎಂದು ಪ್ರತಿಪಕ್ಷಗಳು ಸರಕಾರವನ್ನು ಮುಜುಗರಕ್ಕೆ ಸಿಲುಕಿವೆ ಮಾತ್ರವಲ್ಲ, ಸದನದಲ್ಲಿ ಗದ್ದಲ ಸೃಷ್ಟಿಸಿವಿಧಾನಸಭೆಯ ಬಾವಿಯಲ್ಲಿ ಕುಳಿತು ಸದನವನ್ನು 30 ನಿಮಿಷಗಳ ಕಾಲ ಮುಂದೂಡುವಂತೆ ಮಾಡಿದೆ.

ಈ ಬಜೆಟ್ ಮಂಡಿಸಲು ಸಾಧ್ಯವಿಲ್ಲ. ಅದು ಸೋರಿಕೆಯಾಗಿದೆಯೇ? ಎಂದು ಬಿಜೆಪಿ ನಾಯಕ ಗುಲಾಬ್ ಚಂದ್ ಕಟಾರಿಯಾ ಸದನದಲ್ಲಿ ಹೇಳಿದ್ದಾರೆ.

ಸ್ಪೀಕರ್ ಸಿಪಿ ಜೋಶಿ ಅವರು ಸುವ್ಯವಸ್ಥೆ ಕಾಪಾಡುವಂತೆ ಕೇಳಿಕೊಂಡರೂ ಪ್ರತಿಪಕ್ಷಗಳು ಗದ್ದಲ ಮುಂದುವರಿಸಿದವು. ಕಲಾಪ ಮುಂದೂಡಿದ ನಂತರ ಬಿಜೆಪಿ ಶಾಸಕರು ಸದನದ ಬಾವಿಯೊಳಗೆ ಧರಣಿ ನಡೆಸಿದರು.

ಇಂದು ಸಿಎಂ ಗೆಹ್ಲೋಟ್ ಅವರು ಮಂಡಿಸಿದ ಹಳೆಯ ಬಜೆಟ್ ನಿಂದ ರಾಜಸ್ಥಾನ ವಿಧಾನಸಭೆಗೆ ಅವಮಾನವಾಗಿದೆ ಎಂದು ಬಿಜೆಪಿ ಶಾಸಕ ರಾಜೇಂದ್ರ ರಾಥೋಡ್ ತಿಳಿಸಿರುವುದಾಗಿ ಎ.ಎನ್.ಐ ವರದಿ ಮಾಡಿದೆ.

ಟೀಕೆಗಳ ನಡುವೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಗೆಹ್ಲೋಟ್ ತನ್ನ ಕೈಯಲ್ಲಿರುವ ಬಜೆಟ್‌ ಮತ್ತು ಸದನದ ಸದಸ್ಯರಿಗೆ ನೀಡಲಾದ ಪ್ರತಿಗಳಲ್ಲಿ ವ್ಯತ್ಯಾಸವಿದ್ದರೆ ಮಾತ್ರ ಸೂಚಿಸಬಹುದು. ತನ್ನ ಬಜೆಟ್ ನಲ್ಲಿ ತಪ್ಪಾಗಿ ಒಂದೆರದು ಹಾಳೆಗಳು ಸೇರಿದ್ದರೆ ಅದು ಸೋರಿಕೆ ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಈ ವರ್ಷಾಂತ್ಯದಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ ಗೆಹ್ಲೋಟ್ ಸರ್ಕಾರದ ಕೊನೆಯ ಬಜೆಟ್ ಇದಾಗಿದೆ. ಮೊದಲ ಬಾರಿಗೆ, ರಾಜಸ್ಥಾನದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಬಜೆಟ್ ಅನ್ನು ನೇರವಾಗಿ ತೋರಿಸಲಾಗುತ್ತದೆ.