ಮಂಗಳೂರು: ಪುತ್ತಿಗೆ ಮಠದ ಪರ್ಯಾಯ ಹಿನ್ನೆಲೆಯಲ್ಲಿ ಪರ್ಯಾಯ ಪೀಠವನ್ನೇರುತ್ತಿರುವ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಯೋಜನೆಯಾದ ಕೋಟಿ ಗೀತಾ ಯಜ್ಞದ ಅಂಗವಾಗಿ ಉಜಿರೆಯಲ್ಲಿ ಸಹಸ್ರ ವಿದ್ಯಾರ್ಥಿಗಳಿಗೆ ಗೀತಾ ಲೇಖನ ದೀಕ್ಷೆ ನೀಡಲಾಯಿತು.
ಉಜಿರೆಯ ಎಸ್.ಡಿ.ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಉಡುಪಿ ಪುತ್ತಿಗೆ ಪರ್ಯಾಯದ ಕೋಟಿ ಗೀತಾ ಲೇಖನ ಯಜ್ಞದ ಅಂಗವಾಗಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಸಹಸ್ರ ವಿದ್ಯಾರ್ಥಿಗಳಿಗೆ ಕೋಟಿ ಗೀತಾ ಲೇಖನ ದೀಕ್ಷೆ ನೀಡುವ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪುತ್ತಿಗೆ ಶ್ರೀಗಳು, ಭಗವದ್ಗೀತೆ ಜಾತ್ಯಾತೀತವಾಗಿದ್ದು ಹಿಂದುಗಳಲ್ಲದವರೂ ಭಗವದ್ಗೀತೆಯಲ್ಲಿ ಆಸಕ್ತಿ ವಹಿಸಿ, ಅದರಿಂದ ಸ್ಫೂರ್ತಿ ಪಡೆದಿದ್ದಾರೆ. ಶಿಕ್ಷಣದಲ್ಲಿ ಯೋಗದ ಜತೆಗೆ ಭಗವದ್ಗೀತೆ ಕಲಿಸುವ ಅವಶ್ಯಕತೆಯಿದೆ. ಪರೀಕ್ಷೆ ಎದುರಿಸುವಾಗ ಭಗವದ್ಗೀತೆಯ ಸಾರವನ್ನು ತಿಳಿದುಕೊಂಡಿರಬೇಕು ಅದರಿಂದ ಮಾನಸಿಕ ಶಕ್ತಿ, ಉತ್ಸಾಹ ಬರುತ್ತದೆ. ಮಹಾತ್ಮಾ ಗಾಂಧಿಯವರಿಗೂ ಭಗವದ್ಗೀತೆ ಶಕ್ತಿ, ಪ್ರೇರಣೆ ನೀಡಿದೆ. ಭಗವದ್ಗೀತೆ ಓದಿ, ಬರೆದು, ಮನನ ಮಾಡಿ ಪ್ರಚಾರ ಮಾಡುವ ಮೂಲಕ ಭಗವದ್ಗೀತೆಯ ಜಾಗೃತಿ ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಸಾಂಕೇತಿಕವಾಗಿ ವಿದ್ಯಾರ್ಥಿ ಗಳಿಗೆ ಭಗವದ್ಗೀತೆ ಕೃತಿ ವಿತರಿಸಿದರು.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಮಾತನಾಡಿ ಭಗವದ್ಗೀತೆ ಪ್ರತಿ ವ್ಯಕ್ತಿಗೂ ಜೀವನ ಶಿಕ್ಷಣ, ಬದುಕಿನ ದಾರಿ ತೋರುವ ಕೈಪಿಡಿ. ಮನುಕುಲಕ್ಕೆ ಭಗವಂತ ನೀಡಿದ ಉಪದೇಶ ಸಾರ್ವಕಾಲಿಕವಾಗಿದ್ದು ಪ್ರತಿ ಭಾರತೀಯನೂ ಅದನ್ನು ಓದಿ, ಬರೆದು, ಅಭ್ಯಾಸ ನಡೆಸಿ ಪ್ರಚಾರ ಮಾಡಬೇಕು. ಶ್ರೀ ಕೃಷ್ಣನಂತಹ ಶ್ರೇಷ್ಠ ಆಪ್ತಸಮಾಲೋಚಕ ಬೇರೊಬ್ಬನಿಲ್ಲ. ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಾಗಿರದೆ ದಾರಿದೀಪವಾಗಿ ಮುನ್ನಡೆಸುವುದು ಎಂದರು.
ಸಾಮೂಹಿಕ ಗೀತಾ ಲೇಖನ ದೀಕ್ಷೆ ಸಮಾರಂಭದ ಪ್ರಾಯೋಜಕರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳಿಗೆ ಗೀತಾ ಲೇಖನ ಪುಸ್ತಕಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಪುತ್ತಿಗೆ ಮಠದ ಕಿರಿಯ ಪಟ್ಟದ ಸುಶ್ರೀಂದ್ರ ತೀರ್ಥ ಸ್ವಾಮಿಜಿ, ಕಳೆಂಜ ನಂದಗೋಕುಲ ಗೋಶಾಲೆಯ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ್ ಕಾರಂತ್, ನ್ಯಾಚುರೋಪತಿ ಕಾಲೇಜಿನ ಉಪಪ್ರಾಂಶುಪಾಲೆ ಡಾ.ಸುಜಾತ ಸರಳಾಯ , ಎಸ್ ಡಿ.ಎಂ. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಕರ ಶೆಟ್ಟಿ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಯುವ ವಿಪ್ರ ವೇದಿಕೆ ಅಧ್ಯಕ್ಷ ಸೂರ್ಯನಾರಾಯಣ ಮುರುಡಿತ್ತಾಯ,ಕೊಯ್ಯುರು ನಂದಕುಮಾರ ತಂತ್ರಿ, ಅಶೋಕ್ ಕುಮಾರ್ ಉಪಸ್ಥಿತರಿದ್ದರು.
ಕೋಟಿ ಗೀತಾ ಲೇಖನ ಯಜ್ಞದ ಕಾರ್ಯಕ್ರಮ ಸಂಯೋಜಕ ಕೆ.ವಿ. ರಮಣ್ ಪ್ರಸ್ತಾವಿಸಿ ಗೀತಾ ಲೇಖನ ಯಜ್ಞದ ಬಗೆಗೆ ಮಾಹಿತಿ ನೀಡಿದರು. ದ .ಕ. ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಎಂ.ಎಂ.ದಯಾಕರ್ ಸ್ವಾಗತಿಸಿ, ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ವಂದಿಸಿದರು. ಕಾಲೇಜಿನ ದೈಹಿಕ ಶಿಕ್ಷಕ ಧರ್ಮೇಂದ್ರ ಕಾರ್ಯಕ್ರಮ ನಿರೂಪಿಸಿದರು.