ಬಹುಭಾಷಾ ಹಿನ್ನೆಲೆ ಗಾಯಕ ಪಂಕಜ್ ಉದಾಸ್ ಇಂದು (26 ಫೆಬ್ರವರಿ 2024) ನಿಧನರಾಗಿದ್ದಾರೆ. ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕ ಪಂಕಜ್ ಉದಾಸ್ ಇಹಲೋಕ ತ್ಯಜಿಸಿದ್ದಾರೆ.
ಪಂಕಜ್ ಉದಾಸ್ ಅವರು ಮುಖ್ಯವಾಗಿ ಬಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಹಿಂದಿ ಚಿತ್ರಗಳ ಅಸಂಖ್ಯಾತ ಗೀತೆಗಳನ್ನು ಹಾಡಿದ್ದ ಗಾಯಕ ಪಂಕಜ್ ಉದಾಸ್ ಅವರು ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ ‘ಸ್ಪರ್ಶ’ ಚಿತ್ರದ ‘ಚೆಂದಕ್ಕಿಂತ ಚೆಂದ ನೀನೇ ಸುಂದರ..,’ ಗೀತೆಯನ್ನು ಹಾಡಿ ಸ್ಯಾಂಡಲ್ವುಡ್ ಸಿನಿಪ್ರೇಕ್ಷಕರ ಮೆಚ್ಚುಗೆ ಕೂಡ ಗಳಿಸಿದ್ದರು. ವಿದೇಶಗಳಲ್ಲಿ ಕೂಡ ತಮ್ಮ ಗಝಲ್ಗಳ ಮೂಲಕ ತುಂಬಾ ಪ್ರಖ್ಯಾತಿ ಗಳಿಸಿದ್ದ ಗಾಯಕ ಪಂಕಜ್ ಉದಾಸ್ ಅವರು ಭಾರತದಲ್ಲಿ ಹಲವು ರಾಜ್ಯಗಳಲ್ಲಿ, ಬಹುಭಾಷೆಗಳಲ್ಲಿ ತಮ್ಮ ಸಂಗೀತದ ಸುಧೆ ಹರಿಸಿದ್ದಾರೆ.
ಬಾಲಿವುಡ್ ಚಿತ್ರಗಳ ಬಹಳಷ್ಟು ಗೀತೆಗಳನ್ನು ಹಾಡಿದ್ದ ಗಾಯಕ ಪಂಕಜ್ ಉದಾಸ್ ಅವರು ಮುಖ್ಯವಾಗಿ ತಮ್ಮ ಗಝಲ್ ಗಾಯನಕ್ಕೆ ಹೆಸರುವಾಸಿಯಾಗಿದ್ದರು. ಹಿಂದಿಯಲ್ಲಿ ಅವರು ಹಾಡಿರುವ ಮೊಹ್ರಾ ಚಿತ್ರದ ‘ನಾ ಕಜರೇ ಕೀ ಧರ್’ ಹಾಡು ಜನಮನ ಸೂರೆಗೊಂಡಿದೆ. ‘ಚಿಟ್ಟಿ ಆಯೀ ಹೈ, ಮತ್ ಕರ್ ಇತನಾ ಗುರೂರ್, ಚಾಂದಿ ಜೈಸಾ ರಂಗ್ ಹೈ ತೇರಾ’ ಮುಂತಾದ ಗೀತೆಗಳನ್ನು ಜನರು ಇಂದಿಗೂ ಗುನುಗುತ್ತಲೇ ಇದ್ದಾರೆ. ಕಿಚ್ಚು ಸುದೀಪ್-ರೇಖಾ ನಟನೆಯ ‘ಸ್ಪರ್ಶ’ ಚಿತ್ರದ ಚೆಂದಕ್ಕಿಂತ ಚೆಂದ ನೀನೇ ಸುಂದರ’ ಎಂಬ ಗೀತೆಯನ್ನು ಗಾಯಕ ಪಂಕಜ್ ಉದಾಸ್ ಅವರು ಸುಶ್ರಾವ್ಯವಾಗಿ ಹಾಡಿದ್ದಾರೆ. ಆ ಗೀತೆಯನ್ನು ಕೇಳಿದ ಅದೆಷ್ಟೂ ಸಿನಿಸಂಗೀತ ಪ್ರೇಮಿಗಳು ಗಾಯಕ ಪಂಕಜ್ ಉದಾಸ್ ಅವರಿಗೆ ಅಭಿಮಾನಿಗಳಾಗಿದ್ದಾರೆ. ಅವರು ವೇದಿಕೆಗಳಲ್ಲಿ ಗಝಲ್ಗಳನ್ನು ಹಾಡುತ್ತಿದ್ದರೆ ಸಂಗೀತ ಪ್ರೆಮಿಗಳು ಅಕ್ಷರಶಃ ಮಂತ್ರಮುಗ್ಧರಾಗುತ್ತಿದ್ದರು. ಅಂಥ ಗಾಯಕ ಪಂಕಜ್ ಉದಾಸ್ ಅವರು ಈಗ ಜೀವಂತರಾಗಿ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿರುವ ಹಾಡುಗಳು, ಗಝಲ್ಗಳು ಎಂದೆಂದೂ ಅಜರಾಮರ.