ಹೈದರಾಬಾದ್: ಆರೋಪಿ ಮ್ಯಾನೇಜರ್ ನಟಿಗೆ 80 ಲಕ್ಷ ರೂ. ಮೋಸ ಮಾಡಿದ್ದಾನೆ ಎಂದು ಹೇಳಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಆರೋಪಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.\
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮನ್ನು ವಂಚಿಸಿದ ಮ್ಯಾನೇಜರ್ ಓರ್ವನನ್ನು ಕೆಲಸದಿಂದ ವಜಾ ಮಾಡಿದ್ದಾರೆ.ನಟಿ ರಶ್ಮಿಕಾ ಮಂದಣ್ಣ ಅವರು ತಮಗೆ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕೆಲಸದಿಂದ ತೆಗೆದುಹಾಕಿ ಮನೆಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಟಿಯ ಪ್ರತಿದಿನದ ವ್ಯವಹಾರವನ್ನು ಮ್ಯಾನೇಜರ್ ನೋಡಿಕೊಳ್ಳುತ್ತಿದ್ದನು. ಇತ್ತೀಚೆಗೆ ಅಸಲಿ ವಿಚಾರ ಗೊತ್ತಾಗಿದೆ. ರಶ್ಮಿಕಾ ಈವರೆಗೂ ಎಲ್ಲಿಯೂ ಮೋಸ ಹೋದ ವಿಚಾರ ಹೇಳಿಕೊಂಡಿಲ್ಲ. ಈ ಸುದ್ದಿಗೆ ಹೆಚ್ಚು ಪ್ರಾಮುಖ್ಯತೆ ನೀಡದೇ ಅವರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಆರೋಪಿ ಹಣವನ್ನು ಮರಳಿ ಕೊಟ್ಟಿರುವ ಬಗ್ಗೆಯೂ ಯಾವುದೇ ಖಚಿತ ಮಾಹಿತಿಗಳಿಲ್ಲ.
ಇದಲ್ಲದೇ ಮಂದಣ್ಣ ಬಾಲಿವುಡ್ನ ಹಲವು ಚಿತ್ರಗಳಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸುಕುಮಾರ್ ನಿರ್ದೇಶನದ ಮತ್ತು ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ರಲ್ಲಿಯೂ ಅವರು ನಟಿಸುತ್ತಿದ್ದಾರೆ.
ಇದೂ ಕೂಡ ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದು. ಹಿಂದಿ, ತಮಿಳು, ಮಲಯಾಳಂ, ಮತ್ತು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆಯಾದ ‘ಪುಷ್ಪ 1’ ಹಣ ಗಳಿಕೆಯಲ್ಲಿ ದಾಖಲೆ ಬರೆದಿದ್ದು ‘ಪುಷ್ಪ 2’ರ ಮೇಲೆ ಸಿನಿರಸಿಕರಿಗೆ ಭಾರಿ ನಿರೀಕ್ಷೆ ಇದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಮಿಷನ್ ಮಜ್ನು (2023) ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ ಅಮಿತಾಭ್ ಬಚ್ಚನ್ ಅವರೊಂದಿಗೆ ಗುಡ್ಬೈ ಚಿತ್ರದಲ್ಲಿ ಅಭಿನಯಿಸಿದ್ದರು. ಇದೀಗ ರಣಬೀರ್ ಕಪೂರ್ ನಟನೆಯ ‘ಅನಿಮಲ್’ ನಲ್ಲಿ ನಟಿಸುತ್ತಿದ್ದಾರೆ.
ಆಯಕ್ಷನ್ ಚಿತ್ರ ಇದಾಗಿದ್ದು ಕಬೀರ್ ಸಿಂಗ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಜೊತೆಗೆ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.