ಬೆಳ್ತಂಗಡಿ, ಜು. 16: ಕಾಡುಪ್ರಾಣಿಯೊಂದು ಸಾಕು ನಾಯಿಯನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ಗರ್ಡಾಡಿ ಗ್ರಾಮದ ಡೆಂಜೋಳಿ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಡೆಂಜೋಳಿಯ ರಘುರಾಮ ಶೆಟ್ಟಿ ಎಂಬವರ ಮನೆಯ ಸಾಕು ನಾಯಿ ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿತ್ತು. ಮಂಗಳವಾರ ಬೆಳಿಗ್ಗೆ ಮನೆಯವರು ಹುಡುಕಾಡಿದಾಗ ಗದ್ದೆಯ ಸಮೀಪ ಮೃತದೇಹ ಪತ್ತೆಯಾಗಿದೆ.
ನಾಯಿಯ ಮುಖದ ಭಾಗಕ್ಕೆ ಸಂಪೂರ್ಣ ಗಾಯವಾಗಿದ್ದು, ಕಣ್ಣುಗಳು, ಮೂತಿ ಚಚ್ಚಿ ಹುಡಿಯಾದಂತಿತ್ತು. ಚಿರತೆ ಅಥವಾ ಕಾಡು ಹಂದಿ ದಾಳಿ ನಡೆಸಿ ಕೊಂದಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.
ಈ ಭಾಗದಲ್ಲಿ ಕಾಡುಹಂದಿಗಳ ಉಪಟಳ ಹೆಚ್ಚಾಗಿದ್ದು, ಚಿರತೆಯೂ ಒಡಾಡಿರುವುದು ಕಂಡುಬಂದಿದೆ.
ಅಲ್ಲದೇ ಕಳೆದ ಕೆಲ ಸಮಯದ ಹಿಂದೆ ಇದೇ ನಾಯಿಯ ಮೇಲೆ ಚಿರತೆ ದಾಳಿ ಮಾಡಿದ್ದು, ನಾಯಿಗೆ ಚಿಕಿತ್ಸೆ ನೀಡಲು ಮನೆಗೆ ಬಂದಿದ್ದ ವೈದ್ಯರು ಚಿರತೆ ದಾಳಿ ನಡೆಸಿದ್ದನ್ನು ಖಚಿತಪಡಿಸಿದ್ದರು.