ಯುನೆಸ್ಕೋ ಸಾಂಸ್ಕೃತಿಕ ಅಮೂರ್ತ ಪರಂಪರೆಯ ಪಟ್ಟಿ ಸೇರಿದ ‘ಸ್ತ್ರೀ ಶಕ್ತಿಯ’ ಪ್ರತೀಕ ಗುಜರಾತಿನ ಗರ್ಬಾ ನೃತ್ಯ

ಬೋಟ್ಸ್‌ವಾನಾ: 5 ರಿಂದ 9 ಡಿಸೆಂಬರ್ 2023 ರವರೆಗೆ ಬೋಟ್ಸ್‌ವಾನಾದ ಕಸಾನೆಯಲ್ಲಿ ನಡೆಯುತ್ತಿರುವ ತನ್ನ 18 ನೇ ಅಧಿವೇಶನದಲ್ಲಿ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಅಂತರ್ ಸರ್ಕಾರಿ ಸಮಿತಿಯು ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ‘ಗುಜರಾತ್‌ನ ಗರ್ಬಾ’ ವನ್ನು ಸೇರಿಸಿದೆ.

ಗರ್ಬಾವನ್ನು ಈಗ ಸೇರ್ಪಡೆಗೊಳಿಸುವುದರಿಂದ ಇದು ಪಟ್ಟಿಯಲ್ಲಿ ಭಾರತದ 15 ನೇ ಪ್ರಾತಿನಿಧಿಕ ಪರಂಪರೆಯಾಗಿದೆ.

ಗುಜರಾತ್ ರಾಜ್ಯದಾದ್ಯಂತ ಮತ್ತು ಭಾರತದಾದ್ಯಂತ, ಗರ್ಬಾವನ್ನು ನವರಾತ್ರಿಯ ಉತ್ಸವದಲ್ಲಿ ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಹಬ್ಬವನ್ನು ಸ್ತ್ರೀ ಶಕ್ತಿ ಅಥವಾ ಶಕ್ತಿಯ ಆರಾಧನೆಗೆ ಸಮರ್ಪಿಸಲಾಗಿದೆ. ಈ ಸ್ತ್ರೀ ಶಕ್ತಿಯ ಸಾಂಸ್ಕೃತಿಕ, ಪ್ರದರ್ಶನ ಮತ್ತು ದೃಶ್ಯ ಅಭಿವ್ಯಕ್ತಿಗಳನ್ನು ಗರ್ಬಾ ನೃತ್ಯದ ಮೂಲಕ ವ್ಯಕ್ತಪಡಿಸಲಾಗುತ್ತದೆ. ಗರ್ಬಾದ ಪ್ರದರ್ಶನ ಮತ್ತು ದೃಶ್ಯ ಆಚರಣೆಯು ಮನೆ, ದೇವಾಲಯ , ಹಳ್ಳಿಗಳಲ್ಲಿನ ಸಾರ್ವಜನಿಕ ಸ್ಥಳಗಳು, ನಗರ ಚೌಕಗಳು, ಬೀದಿಗಳು ಮತ್ತು ದೊಡ್ಡ ತೆರೆದ ಮೈದಾನಗಳಲ್ಲಿ ನಡೆಯುತ್ತದೆ. ಗರ್ಬಾ ಹೀಗೆ ಎಲ್ಲರನ್ನೂ ಒಳಗೊಳ್ಳುವ ಸಹಭಾಗಿ ಸಮುದಾಯದ ಕಾರ್ಯಕ್ರಮವಾಗುತ್ತದೆ ಎಂದು ಯುನೆಸ್ಕೋ ಹೇಳಿದೆ.

ಈ ಹಿಂದೆ ಭಾರತದ ಕುಂಭ ಮೇಳವನ್ನೂ ಕೂಡಾ ಇದೇ ಪಟ್ಟಿಯಲ್ಲಿ ಸೇರಿಸಲಾಗಿದೆ.

ಸಮುದಾಯಗಳ ಸಾಂಸ್ಕೃತಿಕ ಅಭ್ಯಾಸಗಳು ಮತ್ತು ಜ್ಞಾನದ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಮೂಲಕ, UNESCO ಜಾಗತಿಕವಾಗಿ ಸಮುದಾಯಗಳ ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.