ಗದ್ದೆಗಿಳಿದು ಕೃಷಿ ಪಾಠ ಕಲಿತರು: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ನಾಟಿ ಕಾರ್ಯ

ಗಂಗೊಳ್ಳಿ : ಯುವ ಜನತೆ ಕೃಷಿಯಿಂದ ದೂರವಾಗುತ್ತಿದ್ದಾರೆ ಎಂಬ ಅಪವಾದ ಕೇಳಿ ಬರುತ್ತಿರುವ ಇಂದಿನ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಕೃಷಿ ಚಟುವಟಿಕೆ ನಡೆಸುವ ಮೂಲಕ ಯುವ ಜನತೆ ಕೃಷಿಯಿಂದ ದೂರ ಸರಿಯುತ್ತಿಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವ ಪ್ರಯತ್ನ ನಡೆಸಿದ್ದಾರೆ.
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಮತ್ತು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗಂಗೊಳ್ಳಿಯ ನಾಟಿವೈದ್ಯ ನಾರಾಯಣ ಪೂಜಾರಿ ಅವರ ಗದ್ದೆಯಲ್ಲಿ ಸೋಮವಾರ ನಾಟಿ ಕಾರ್ಯ ನಡೆಸಿದರು. ರೋಟರಿ ಕ್ಲಬ್ ಗಂಗೊಳ್ಳಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಎರಡು ಶಾಲೆಗಳ ಸುಮಾರು ೬೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಉತ್ಸಾಹದಿಂದ ಗದ್ದೆಗಿಳಿದು ಕೃಷಿ ಚಟುವಟಿಕೆ ನಡೆಸಿ ಆನಂದಿಸಿದರು. ಗದ್ದೆಗಿಳಿದು ನಾಟಿ ಕಾರ್ಯದಲ್ಲಿ ತೊಡಗಿದ ವಿದ್ಯಾರ್ಥಿಗಳ ಮುಖದಲ್ಲಿ ಸಂತಸ ಮೂಡಿತ್ತು.

ಭತ್ತ ಬೆಳೆಯಲು ಮತ್ತು ಕೃಷಿ ಚಟುವಟಿಕೆ ನಡೆಸಲು ರೈತರು ಪಡುವ ಕಷ್ಟವನ್ನು ಸ್ವತ: ಅನುಭವಿಸಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕೃಷಿಯತ್ತ ಒಲವು ತೋರುವ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಗತಿಪರ ಕೃಷಿಕ ಗೋವಿಂದ ಪೂಜಾರಿ ಮತ್ತು ವಿಜಯ ಪೂಜಾರಿ ಅವರು ನೇಜಿ ತಯಾರಿಸುವ ರೀತಿ, ನಾಟಿ ಮಾಡುವ ವಿಧಾನ, ಯಂತ್ರ ನಾಟಿ ಪದ್ಧತಿ, ಗದ್ದೆಗಳನ್ನು ನಾಟಿಗೆ ವ್ಯವಸ್ಥೆಗೊಳಿಸುವ ಕ್ರಮ, ಕೃಷಿಗೆ ಉಪಯೋಗಿಸುವ ಗೊಬ್ಬರ ಇತ್ಯಾದಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಶಿವಾನಂದ ಪೂಜಾರಿ, ಕಾರ್ಯದರ್ಶಿ ರಾಘವೇಂದ್ರ ಶೇರುಗಾರ್, ಮಾಜಿ ಅಧ್ಯಕ್ಷ ಕೆ.ರಾಮನಾಥ ನಾಯಕ್, ಕೃಷ್ಣ ಪೂಜಾರಿ, ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಹಶಿಕ್ಷಕ ಗೋಪಾಲ ದೇವಾಡಿಗ, ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿಯರಾದ ಸುಜಾತಾ, ರೇಷ್ಮಾ ನಾಯಕ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶಾಂತಿ ಡಿಕೋಸ್ಟಾ ಮತ್ತಿತರರು ಉಪಸ್ಥಿತರಿದ್ದರು.