ಕುಂದಾಪುರ : ಕ್ವಾರಂಟೈನ್ ಮುಗಿಸಿದ ಬಳಿಕ ಸರಕಾರದ ಆದೇಶದ ಹಿನ್ನಲೆ ಮನೆಗೆ ಬಂದ ಗಂಗೊಳ್ಳಿ ಗ್ರಾಮದ ಮಹಿಳೆಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಗಂಗೊಳ್ಳಿ ಗ್ರಾಮದ ದಾಕುಹಿತ್ಲು ಪ್ರದೇಶದ ಮೊಗೇರಹಿತ್ಲು ಪರಿಸರವನ್ನು ಭಾನುವಾರ ಸೀಲ್ಡೌನ್ ಮಾಡಲಾಗಿದೆ.
ಗಂಗೊಳ್ಳಿ ಗ್ರಾಮದ ದಾಕುಹಿತ್ಲು ಮೊಗೇರಹಿತ್ಲು ಎಂಬಲ್ಲಿನ ಮನೆಗೆ ಮಹಾರಾಷ್ಟ್ರದಿಂದ ಆಗಮಿಸಿದ ಮಹಿಳೆಯ ವರದಿಯು ಪಾಸಿಟಿವ್ ಬಂದಿದ್ದು, ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತ ಮಹಿಳೆಯ ಮನೆ ಸಮೀಪದ 100 ಮೀಟರ್ ವ್ಯಾಪ್ತಿಯಲ್ಲಿರುವ ಮನೆಗಳನ್ನು ಸೀಲ್ಡೌನ್ ಮಾಡಲಾಗಿದ್ದು, ಈ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.
ಮಹಾರಾಷ್ಟ್ರದಿಂದ ಆಗಮಿಸಿದ ಇವರು ಹೊಸಾಡು ಶಾಲೆಯಲ್ಲಿ ಕ್ವಾರಂಟೈನ್ನಲ್ಲಿದ್ದು ರಿಪೋರ್ಟ್ ಲಭ್ಯವಾಗುವ ಮುನ್ನವೇ ಮನೆಗೆ ಬಂದಿದ್ದು, ಜೂ.6 ರಂದು ಇವರಿಗೆ ಕರೊನಾ ಪಾಸಿಟಿವ್ ಇದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಗಂಗೊಳ್ಳಿ ಗ್ರಾಮ ಕರಣಿಕ ರಾಘವೇಂದ್ರ ಡಿ. ಅವರು ಕಂಟೈನ್ಮೆಂಟ್ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸೀಲ್ಡೌನ್ ಮಾಡಿದ ಸ್ಥಳಕ್ಕೆ ಯಾರೂ ಪ್ರವೇಶಿಸುವಂತಿಲ್ಲ ಮತ್ತು ಮನೆಯವರು ಯಾರು ಹೊರಗೆ ಬರುವಂತಿಲ್ಲ ಎಂದು ಸೂಚನೆ ನೀಡಿದರು.
ಗಂಗೊಳ್ಳಿ ಗ್ರಾಪಂ ಕಾರ್ಯದರ್ಶಿ ದಿನೇಶ ಶೇರುಗಾರ್, ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಟಾಸ್ಕ್ಪೋರ್ಸ್ ಸದಸ್ಯ ಬಿ.ರಾಘವೇಂದ್ರ ಪೈ, ಗ್ರಾಪಂ ಸದಸ್ಯ ತಬ್ರೇಜ್, ಕಿರಿಯ ಆರೋಗ್ಯ ಸಹಾಯಕಿ ಶ್ರೀದೇವಿ, ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಫೆರ್ನಾಂಡಿಸ್, ಪೊಲೀಸ್ ಸಿಬ್ಬಂದಿ ನಾಗರಾಜ ಕುಲಾಲ್, ಆಶಾ ಕಾರ್ಯಕರ್ತೆಯರಾದ ಕಲ್ಪನಾ ಶೇರುಗಾರ್, ರೇಣುಕಾ ಆರ್. ಉಪಸ್ಥಿತರಿದ್ದರು.