ಗಂಗೊಳ್ಳಿ:ಬೈಲು ಸ್ವಾಮಿ, ಅಶ್ವಥ ಮರ ಹಾಗೂ ನವಗ್ರಹ ಮಂದಿರಗಳಿಗೆ ಭಕ್ತರು ಕಾಯಕಲ್ಪ:ವಿವಿಧ ಧಾರ್ಮಿಕ ಅನುಷ್ಠಾನ

ಗಂಗೊಳ್ಳಿ : ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಶ್ರೀ ಇಂದುಧರ ದೇವಸ್ಥಾನದ ಎದುರುಗಡೆ ಇರುವ ನಾಗಬನ, ಬೈಲು ಸ್ವಾಮಿ, ಅಶ್ವಥ ಮರ ಹಾಗೂ ನವಗ್ರಹ ಮಂದಿರಗಳಿಗೆ ಭಕ್ತರು ಕಾಯಕಲ್ಪ ನೀಡಿದ್ದು, ಮೇ ೨೯ರಂದು ಈ ಸಂಬಂಧ ವಿವಿಧ ಧಾರ್ಮಿಕ ಅನುಷ್ಠಾನಗಳು ಸಂಪನ್ನಗೊಳ್ಳಲಿದೆ.
ನಾಗದೇವರ ಸಂಕಲ್ಪದಂತೆ ಅಂದು ಬೆಳಿಗ್ಗೆ ೯ ಗಂಟೆಯಿಂದ ನಾಗಸನ್ನಿಧಿಯಲ್ಲಿ ಶ್ರೀ ಅಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಅನಂತಕೃಷ್ಣ ಭಟ್ ನೇತೃತ್ವದಲ್ಲಿ ಶ್ರೀ ನಾಗದೇವರು, ಬೈಲು ಸ್ವಾಮಿ, ಅಶ್ವಥನಾರಾಯಣ ನವಗ್ರಹ ಸಾನಿಧ್ಯದಲ್ಲಿ ಕಲಾಭಿವೃದ್ಧಿಗೋಸ್ಕರ ನವಕಲಶ ಹಾಗೂ ಸಾನಿಧ್ಯ ಹವನ ಮತ್ತಿತರ ಧಾರ್ಮಿಕ ಅನುಷ್ಠಾನಗಳು ನಡೆಯಲಿದೆ.
ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಶ್ರೀ ಇಂದುಧರ ದೇವಸ್ಥಾನದ ಎದುರುಗಡೆ ಇರುವ ನಾಗಬನ, ಬೈಲು ಸ್ವಾಮಿ, ಅಶ್ವಥ ಮರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರ ಕರಕಮಲಗಳಿಂದ ಪೂಜಿಲ್ಪಟ್ಟ ನಾಗಬನ ಮತ್ತು ಬೈಲು ಸ್ವಾಮಿ ಸನ್ನಿಧಿ ಒಂದೊಮ್ಮೆ ಅಜೀರ್ಣ ಸ್ಥಿತಿಯಲ್ಲಿದ್ದಾಗ ನಾಗಬನ ವಠಾರವನ್ನು ನಂಬಿದ ಭಕ್ತಾದಿಗಳು ಶ್ರೀ ಇಂದುಧರ ದೇವಸ್ಥಾನದ ಆಡಳಿತ ಮಂಡಳಿಯ ಮೇಲ್ವಿಚಾರಣೆಯಲ್ಲಿ ಅಶ್ವಥ ಕಟ್ಟೆ ಸುತ್ತಲೂ ಕಲ್ಲಿನ ಆವರಣ ಗೋಡೆ ಕಟ್ಟಿ ಅಶ್ವಥ ಮರಕ್ಕೆ ಅಶ್ವಥೋಪಾಯನ ನಡೆಸಲಾಗಿತ್ತು ಮತ್ತು ನವಗ್ರಹ ವಿಗ್ರಹ ಸ್ಥಾಪಿಸಲಾಗಿತ್ತು.
ಇದೀಗ ಪುನ: ಅಶ್ವಥ ಕಟ್ಟೆಯನ್ನು ಸುಂದರವಾಗಿ ನವೀಕರಣಗೊಳಿಸಲಾಗಿದೆ. ನಾಗ ಬನದ ಪಕ್ಕದಲ್ಲಿ ಧ್ಯಾನಸ್ಥ ಶಿವನ ವಿಗ್ರಹ ಪಕ್ಕದಲ್ಲಿ ಕಾಮಧೇನು ಮೂರ್ತಿಯನ್ನು ರಚಿಸಲಾಗಿದ್ದು ನಾಗಬನ ಪ್ರದೇಶವೇ ಅಪೂರ್ವವಾಗಿ ಶೋಭಿಸುತ್ತಿದೆ.