ಗಂಗೊಳ್ಳಿ ಬಂದರಿನ ಬ್ರೇಕ್ ವಾಟರ್ ತಡೆಗೋಡೆ ಕುಸಿಯುತ್ತಿದೆ ಎಚ್ಚರ! 

ಕುಂದಾಪುರ: ಕಳೆದೆರಡು ವರ್ಷಗಳ ಹಿಂದಷ್ಟೇ ಪೂರ್ಣಗೊಂಡಿದ್ದ 102 ಕೋಟಿ ರೂ. ವೆಚ್ಚದ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಬ್ರೇಕ್ ವಾಟರ್ ತಡೆಗೋಡೆ ದಕ್ಷಿಣ ಭಾಗದಲ್ಲಿ ಬಹುತೇಕ ಕುಸಿದಿದ್ದು, ತಡೆಗೋಡೆಗೆ ಹಾಕಲಾಗಿದ್ದ ಕಲ್ಲುಬಂಡೆಗಳು ಸಮುದ್ರ ಪಾಲಾಗುತ್ತಿವೆ.
ಬ್ರೇಕ್ ವಾಟರ್ ಕಾಮಗಾರಿಯಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಷಿಣ ದಿಕ್ಕಿನಲ್ಲಿ ಪಶ್ಚಿಮಕ್ಕೆ ಸುಮಾರು 700 ಮೀಟರ್ ಉದ್ದದ ತಡೆಗೋಡೆ ನಿರ್ಮಿಸಲಾಗಿತ್ತು. ಇದೀಗ ತಡೆಗೋಡೆಯ ದಕ್ಷಿಣ ಭಾಗದಲ್ಲಿ ಕಲ್ಲುಗಳು ಜಾರಿ ಕಡಲು ಸೇರುತ್ತಿದ್ದು, ತಡೆಗೋಡೆ ಕುಸಿಯಲಾರಂಭಿಸಿದೆ. ತಡೆಗೋಡೆಯ ಕಲ್ಲು ಅಲೆಗಳ ಅಬ್ಬರಕ್ಕೆ ಕುಸಿದು ಸಮುದ್ರ ಪಾಲಾಗುತ್ತಿರುವುದರಿಂದ ಆತಂಕ ಹೆಚ್ಚಿಸಿದೆ. ಕಲ್ಲು ಬಂಡೆಗಳು ಹೆಚ್ಚಿನ ಪ್ರಮಾಣದಲ್ಲಿ ಕುಸಿತಕ್ಕೊಳಗಾಗುತ್ತಿರುವುದರಿಂದ ಮುಂಬರುವ ಮಳೆಗಾಲದಲ್ಲಿ ತಡೆಗೋಡೆ ಅಪಾಯಕ್ಕೆ ಸಿಲುಕಿ ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ.
ಇದೀಗ ಬ್ರೇಕ್ ವಾಟರ್ ಕಾಮಗಾರಿಯ ತಡೆಗೋಡೆ ಕುಸಿಯುತ್ತಿರುವುದು ಮೀನುಗಾರರನ್ನು ಚಿಂತೆಗೀಡು ಮಾಡಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ತುರ್ತು ರಕ್ಷಣಾ ಕಾಮಗಾರಿ ನಿರ್ವಹಿಸಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.