ಗಂಗೊಳ್ಳಿ : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅದ್ಭುತ ಸಾಧನೆ ಮಾಡಿದೆ. ಬಿಜೆಪಿಯನ್ನು ಒಂದಂಕಿಗೆ ತಂದು ನಿಲ್ಲಿಸುವುದಾಗಿ ಹೇಳುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಂದೆಂದೂ ಕಂಡರಿಯದ ಸೋಲನ್ನು ಅನುಭವಿಸಿ ಒಂದಂಕಿಗೆ ಬಂದು ನಿಂತಿವೆ ಎಂದು ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಬಾರಿಸಿದ ಹಿನ್ನಲೆಯಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಮುಂಭಾಗ ಮತ್ತು ಮ್ಯಾಂಗನೀಸ್ ರಸ್ತೆ ವಠಾರದಲ್ಲಿ ಗುರುವಾರ ಸಂಜೆ ಜರಗಿದ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿಯವರ ವಿರುದ್ಧ ಇಲ್ಲಸಲ್ಲದ ಮಾತುಗಳನ್ನಾಡಿ ಅವರನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ನವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಮೋದಿ ಸುನಾಮಿಗೆ ತತ್ತರಿಸಿ ಹೋಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಬಹುತೇಕ ಹಿರಿಯ ಮುಖಂಡರು ಸೋತು ಮನೆಗೆ ಸೇರಿಕೊಂಡಿದ್ದಾರೆ ಎಂದು ಅವರು ಹೇಳಿದರು.
ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಗಂಗೊಳ್ಳಿ ಗ್ರಾಪಂ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಮುಂಭಾಗ ಮತ್ತು ಮ್ಯಾಂಗನೀಸ್ ರಸ್ತೆ ವಠಾರದಲ್ಲಿ ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಿ ಪಕ್ಷದ ಗೆಲುವನ್ನು ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು ಗ್ರಾಮ ಪಂಚಾಯತ್ ಕಛೇರಿ ಬಳಿಯಿಂದ ಮ್ಯಾಂಗನೀಸ್ ರಸ್ತೆ ತನಕ ವಿಜಯೋತ್ಸವ ನಡೆಸಿದರು ಹಾಗೂ ಗಂಗೊಳ್ಳಿಯ ಪ್ರಮುಖ ಬೀದಿಯಲ್ಲಿ ಬೈಕ್ ರ್ಯಾಲಿ ನಡೆಸಿ ಸಂಭ್ರಮಿಸಿದರು.