ಗಂಗೊಳ್ಳಿ: ಆಟೊ ಚಾಲಕನಿಗೆ ಹಲ್ಲೆ ನಡೆಸಿ ಚಿನ್ನದ ಸರ ಸುಲಿಗೆ

ಗಂಗೊಳ್ಳಿ: ಬಾಡಿಗೆಗೆ ಹೋಗುವ ನೆಪದಲ್ಲಿ ಆಟೊಗೆ ಹತ್ತಿದ ವ್ಯಕ್ತಿಯೋರ್ವ ಆಟೊ ಚಾಲಕನ ಕುತ್ತಿಗೆಯಲ್ಲಿದ್ದ ₹ 52 ಸಾವಿರ ಮೌಲ್ಯದ ಎರಡೂವರೆ ಪವನ್ ತೂಕದ ಚಿನ್ನದ ಸರವನ್ನು ಸುಲಿಗೆಗೈದು ಪರಾರಿಯಾದ ಘಟನೆ ಕುಂದಾಪುರ ತಾಲೂಕಿನ ಹರ್ಕೂರು ಗ್ರಾಮದ ಕಟ್ಟಿನಮಕ್ಕಿ ಎಂಬಲ್ಲಿ ನಡೆದಿದೆ.

ಹಕ್ಲಾಡಿ ಗ್ರಾಮದ ಹಕ್ಲಾಡಿಗುಡ್ಡೆಯ ಹಾಡಿಮನೆ ನಿವಾಸಿ ಶಿವ ಪೂಜಾರಿ ಚಿನ್ನದ ಸರ ಕಳೆದುಕೊಂಡ ಆಟೊ ಚಾಲಕ. ಇವರು ಡಿ. 24ರ ರಾತ್ರಿ ಆಲೂರು-ಮುಳ್ಳಿಕಟ್ಟೆ ರಸ್ತೆಯಲ್ಲಿ ತನ್ನ ಆಟೊ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಕಟ್ಟಿನಮಕ್ಕಿ ಎಂಬಲ್ಲಿ ರಸ್ತೆ ಬದಿಯಲ್ಲಿ ಎರಡು ಬೈಕ್ ನೊಂದಿಗೆ ನಿಂತಿದ್ದ ನಾಲ್ವರು ಆಟೊವನ್ನು ಅಡ್ಡಹಾಕಿ ನಿಲ್ಲಿಸಿದ್ದಾರೆ. ಬಳಿಕ ಓರ್ವ ಆರೋಪಿ ಬೈಕ್‌ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ ಮುಳ್ಳಿಕಟ್ಟೆಗೆ ಹೋಗಿ ಪೆಟ್ರೋಲ್‌ ತರುವ ಎಂದು ಹೇಳಿ ಆಟೊ ಹತ್ತಿದ್ದಾನೆ. ಶಿವ ಪೂಜಾರಿ ಆಟೊ ಚಲಾಯಿಸಿಕೊಂಡು ಸ್ವಲ್ಪ ಮುಂದೆ ಬಂದಾಗ ಹಿಂದೆ ಕುಳಿತಿದ್ದ ವ್ಯಕ್ತಿಯು ಶಿವ ಅವರ ಎರಡೂ ಕೈಗಳನ್ನು ಹಿಂದಕ್ಕೆ ಎಳೆದು ಗಟ್ಟಿಯಾಗಿ ಹಿಡಿದುಕೊಂಡು ರಿಕ್ಷಾವನ್ನು ನಿಲ್ಲಿಸಿದ್ದಾನೆ. ಬಳಿಕ ಎರಡು ಬೈಕ್‌ನಲ್ಲಿ ಬಂದ ಮೂವರು ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಆಟೊ ಚಾಲಕ ಶಿವ ಪೂಜಾರಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.