ಕುಂದಾಪುರ: ಗೋ ಹತ್ಯೆ ವಿರೋಧಿಸಿ ಮತ್ತು ಗೋ ಹಂತಕರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ವತಿಯಿಂದ ಶುಕ್ರವಾರ ಗಂಗೊಳ್ಳಿಯಲ್ಲಿ ಬೃಹತ್ ಪ್ರತಿಭಟನಾ ಜಾಥಾ ಮತ್ತು ಸಭೆ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಟಿ.ಕೆ. ಉಲ್ಲಾಸ್ ಅವರು, ಗಂಗೊಳ್ಳಿಯಲ್ಲಿ ಅಮಾನುಷವಾಗಿ ಮತ್ತು ಭಯಾನಕ ರೀತಿಯಲ್ಲಿ ಗೋವುಗಳನ್ನು ವಧೆಗೊಳಿಸಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತಿ ಮೆರೆದಿದ್ದಾರೆ. ಇದು ಖಂಡನೀಯ. ಈ ಕೃತ್ಯ ಎಸಗಿದವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಅಮಾನವೀಯ ಕೃತ್ಯವನ್ನು ಮಾಡಿ ಅದರ ವಿಡಿಯೋ ವೈರಲ್ ಮಾಡಿರುವ ಬಗ್ಗೆ ಪೊಲೀಸರು ಸುಮೊಟೊ ಕೇಸ್ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬಹುದಿತ್ತು. ಆದರೆ ಪೊಲೀಸರು ಗೋಕಳ್ಳರನ್ನು ಬಂಧಿಸುವ ಬದಲು ಗೋರಕ್ಷಕರ ವಿರುದ್ಧ ಕೇಸ್ ಹಾಕುತ್ತಾರೆ ಎಂದು ದೂರಿದರು.
ಗೋವು ಹಿಂದುಗಳಿಗೆ ತಾಯಿ ಸಮಾನ. ನಾವು ಅದನ್ನು ಆರಾಧನೆ ಮಾಡುತ್ತೇವೆ. ಆ ಮುಗ್ಧ ಪ್ರಾಣಿಯನ್ನು ಕೊಂದು ವಿಕೃತಿ ಮೆರೆದರೆ ನಾವು ಸುಮ್ಮನೆ ಕೂರುವುದಿಲ್ಲ. ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾದಿತು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರೂ ಗಂಗೊಳ್ಳಿ ಠಾಣೆಗೆ ಇದರ ಬಗ್ಗೆ ಮಾಹಿತಿ ಇದ್ದಂತಿಲ್ಲ ಎಂದು ಆರೋಪಿಸಿದ ಅವರು, ಹಿಂದೂ ಸಮಾಜ ಇಂತಹ ನೀಚ ಕೃತ್ಯಗಳ ವಿರುದ್ದ ಒಟ್ಟಾಗಿ ಹೋರಾಡಲು ಸಜ್ಜಾಗಿದೆ. ಗೋ ಭಕ್ಷಕರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಕ್ರಮ ಮಸೀದಿಗಳನ್ನು ತೆರವುಗೊಳಿಸುವ ಕೆಲಸ ಜಿಲ್ಲಾಡಳಿತ ಮಾಡಬೇಕು. ಲೌಡ್ ಸ್ಪೀಕರ್ ಹಾಕಿ ಅಜಾನ್ ಕೂಗುವುದರಿಂದ ಎಲ್ಲರಿಗೂ ಸಮಸ್ಯೆಯ ಆಗುತ್ತಿದೆ. ಹಿಂದೂ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಶೀಘ್ರವೇ ಗೋ ಕಳ್ಳರ ಬಂಧನವಾಗಬೇಕು, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಗೋ ಹಂತಕರ ಬಂಧನ ಮತ್ತು ಗಡಿಪಾರಿಗೆ ಒತ್ತಾಯಿಸಿ ಇದೇ ಸಂದರ್ಭ ತಹಶಿಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗದ ಪ್ರ. ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಹಿಂ. ಜಾ. ವೇ. ಉಡುಪಿ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್, ಗಂಗೊಳ್ಳಿ ಹಿಂ. ಜಾ. ವೇ. ಅಧ್ಯಕ್ಷ ಗೋವಿಂದ ಶೇರುಗಾರ್, ಮುಖಂಡರಾದ ವಾಸುದೇವ ಗಂಗೊಳ್ಳಿ, ನವೀನ್ ಗಂಗೊಳ್ಳಿ, ಯಶವಂತ್ ಗಂಗೊಳ್ಳಿ, ಮಹೇಶ್ ಬೈಂದೂರು ಮೊದಲಾದವರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ನಡೆದ ಪ್ರತಿಭಟನಾ ಜಾಥಾದಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದರು.