ಭಕ್ತರ ಸಹಕಾರದಿಂದ ಗಣೇಶೋತ್ಸವ ಯಶಸ್ವಿ: ಕೃಷ್ಣಮೂರ್ತಿ ಆಚಾರ್ಯ

ಉಡುಪಿ: ಕನ್ನರ್ಪಾಡಿ–ಕಿನ್ನಿಮುಲ್ಕಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ನಡೆದ 21ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಮಾರೋಪ ಸಮಾರಂಭ ನಡೆಯಿತು.

ಸಮಿತಿಯ ಕೆ. ಕೃಷ್ಣಮೂರ್ತಿ ಆಚಾರ್ಯ ಮಾತನಾಡಿ, 10 ದಿನಗಳ ಗಣೇಶೋತ್ಸವವನ್ನು ಯಶಸ್ವಿಯಾಗಿ ಆಚರಿಸಲು ಭಕ್ತರ ಸಹಕಾರವೇ ಪ್ರಮುಖ ಕಾರಣವಾಗಿದೆ.

ಉತ್ಸವದ ಅಂಗವಾಗಿ ಸುಮಾರು ಒಂದು ಸಾವಿರ ಕಲಾವಿದರಿಗೆ ವೇದಿಕೆ ಕಲ್ಪಿಸಲಾಗಿದ್ದು, ತಾಳಮದ್ದಲೆ, ಭಜನೆ, ಯಕ್ಷಗಾನ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದರು.

ಉದ್ಯಮಿ ಸುಭಾಷ್ ಎಂ. ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಪರ್ಸಿನ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ ಬಹುಮಾನ ಹಾಗೂ ನಿಧಿ ವಿತರಿಸಿದರು.

ಉದ್ಯಮಿಗಳಾದ ಗಣನಾಥ್ ಹೆಗ್ಡೆ, ಪುರುಷೋತ್ತಮ ಮೆಂಡನ್, ಅಭಿಜಿತ್ ಸುವರ್ಣ, ಗುಣಾಕರ ಸನಿಲ್, ಸುಂದರ್ ಶೆಟ್ಟಿ, ವಿದ್ಯಾಚರಣ್ ಶೆಟ್ಟಿಗಾರ್, ಹರೀಶ್ ದೇವಾಡಿಗ, ಚಿತ್ರಕಲಾವಿದ ಮಂಜುನಾಥ್ ಕೆ. ಬೈಲೂರು, ನಿವೃತ್ತ ಅರಣ್ಯ ಅಧಿಕಾರಿ ಸುಧಾಕರ ಪೂಜಾರಿ, ಕಡೆಕಾರ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ನಿರ್ಮಲಾ, ಪೀತಾಂಬರಿ, ಪ್ರಧಾನ ಕಾರ್ಯದರ್ಶಿ ಜಯಕರ್ ಸೇರಿಗಾರ್ ಹಾಗೂ ಅಮೃತಾಕೃಷ್ಣಮೂರ್ತಿ ಉಪಸ್ಥಿತರಿದ್ದರು.