ಉಡುಪಿ: ಗಣೇಶೋತ್ಸವಗಳಲ್ಲಿ ಪಿಓಪಿ ಬಳಸಿ ತಯಾರಿಸಿದ ಯಾವುದೇ ಗಣೇಶ ವಿಗ್ರಹಗಳನ್ನು ಬಳಸುವಂತಿಲ್ಲ ಹಾಗೂ ಅವುಗಳನ್ನು ವಿಸರ್ಜಿಸಲು ಯಾವುದೇ ಅವಕಾಶ ಇರುವುದಿಲ್ಲ. ಒಂದು ವೇಳೆ ಬಳಸಿದಲ್ಲಿ ಇಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ರಾಸಾಯನಿಕ ಬಣ್ಣಗಳನ್ನು ಉಪಯೋಗಿಸಿದ ವಿಗ್ರಹಗಳನ್ನು ಕೂಡ ಬಳಸುವಂತಿಲ್ಲ, ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಪರಿಸರ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅವರು ಶುಕ್ರವಾರ ಗಣೇಶೋತ್ಸವ ಆಚರಣೆ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಗಣಪತಿ ಮೂರ್ತಿಯನ್ನು ಎಲ್ಲೆಂದರಲ್ಲಿ, ರಸ್ತೆ ಬದಿಯಲ್ಲಿ ಪ್ರತಿಷ್ಠಾಪನೆ ಮಾಡುವಂತಿಲ್ಲ ಎಂದು ತಿಳಿಸಿದರು ಹಾಗೂ ಈ ಬಗ್ಗೆ ನಿಗದಿತ ಸ್ಥಳಗಳನ್ನು ಗುರುತಿಸಲಾಗಿರುತ್ತದೆಯೇ ಎಂದು ಪೌರಾಯುಕ್ತರು ನಗರಸಭೆ ಇವರಲ್ಲಿ ಕೇಳಿದಾಗ, ಪೌರಾಯುಕ್ತರು ನಗರಸಭೆ ಉಡುಪಿ ಇವರು ಆಯೋಜಕರಿಗೆ ಕೋರಿದ ಸ್ಥಳಗಳಲ್ಲಿ ಸ್ಥಳ ತನಿಖೆ ನಡೆಸಿ, ಆಕ್ಷೇಪ ಇಲ್ಲದ ಸ್ಥಳಗಳಲ್ಲಿ ಮಾತ್ರ ಗಣಪತಿ ಇಡಲು ಅನುಮತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಆಯೋಜಕರು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಂದ ಅನುಮತಿ ಪಡೆದು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗುವಂತೆ ಜೋರಾಗಿ ಮೈಕ್ ಅಳವಡಿಸಬಾರದು. ಮೆರವಣಿಗೆಯ ಸಂದರ್ಭದಲ್ಲಿ ಡಿಜೆ ಹಾಕಿ ತೊಂದರೆ ಕೊಡಬಾರದು. ಸರ್ಕಾರಿ ನಿಯಮದಂತೆ ವಾಸಸ್ಥಳ ಪ್ರದೇಶದಲ್ಲಿ 55 ಡೆಸಿಮಲ್, ವಾಣಿಜ್ಯ ಪ್ರದೇಶದಲ್ಲಿ 65 ಡೆಸಿಮಲ್ ಶಬ್ದ ಪ್ರಮಾಣದಲ್ಲಿ ಬೆಳಿಗ್ಗೆ 6.00 ಗಂಟೆಯಿಂದ ರಾತ್ರಿ 10.00ಗಂಟೆ ತನಕ ಮಾತ್ರ ಪೊಲಿಸ್ ಇಲಾಖೆಯ ಅನುಮತಿ ಪಡೆದು ಮೈಕ್ ಅಳವಡಿಸಬೇಕು ಎಂದು ತಿಳಿಸಿದರು.
ವಿಸರ್ಜನಾ ಮೆರವಣಿಗೆಗೆ ಪೊಲೀಸ್ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು. ಕಡ್ಡಾಯವಾಗಿ ಬಾರ್‍ಗಳನ್ನು ಮುಚ್ಚಬೇಕು. ಮೆರವಣಿಗೆ ಸಂದರ್ಭದಲ್ಲಿ ಕುಡಿದು ನೃತ್ಯ ಮಾಡುವುದು, ಗಲಾಟೆಗಳು ಸಂಭವಿಸಿದಲ್ಲಿ ಇದಕ್ಕೆ ಕಾರ್ಯಕ್ರಮ ಆಯೋಜಕರೇ ಜವಾಬ್ದಾರರಾಗಿರುತ್ತಾರೆ. ಗಣೇಶೋತ್ಸವ ಆಚರಣೆಗಾಗಿ ಸಾರ್ವಜನಿಕರಲ್ಲಿ ಬಲವಂತವಾಗಿ ಚಂದಾ ಹಣ ವಸೂಲಿ ಮಾಡಬಾರದೆಂದು ತಿಳಿಸಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಮಾತನಾಡಿ ಈಗಾಗಲೇ ಮೂರ್ತಿ ತಯಾರಿಕಾ ಸ್ಥಳಗಳಿಗೆ ಭೇಟಿ ಕೊಟ್ಟು ಈ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿರುತ್ತದೆ. ಈ ಬಗ್ಗೆ ಸಭೆ ನಡೆಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿರುತ್ತದೆ. ಉಡುಪಿ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಇರುವುದಿಲ್ಲವೆಂದು ತಿಳಿಸಿದ ಅವರು ಶಾಲಾ/ಕಾಲೇಜುಗಳಲ್ಲಿ ಕೂಡ ಈ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ ಎಂದರು.
ಪೊಲಿಸ್ ಅಧೀಕ್ಷಕಿ ನಿಷಾ ಜೇಮ್ಸ್ ಮಾತನಾಡಿ , ಹೊರಾಂಗಣವಾಗಲಿ ಅಥವಾ ಸಭಾಂಗಣವಾಗಲಿ ಕಾನೂನು ನಿಯಮಾನುಸಾರ ಬೆಳಿಗ್ಗೆ 6.00 ಗಂಟೆಯಿಂದ 10.00 ಗಂಟೆಯವರೆಗೆ ಮಾತ್ರ ಮೈಕ್ ಅಳವಡಿಸಲು ಅವಕಾಶವಿರುತ್ತದೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಲ್ಲಿ ತಾವು ಕ್ರಮ ಕೈಗೊಳ್ಳುವುದು ಅವಶ್ಯಕವಾಗಿರುತ್ತದೆ. ಮೆರವಣಿಗೆಯಲ್ಲಿ ಡಿಜೆ ಅಳವಡಿಸಬಾರದಾಗಿ ಈಗಾಗಲೇ ಮಾನ್ಯ ಸರ್ವೊಚ್ಚ ನ್ಯಾಯಾಲಯದಿಂದ ಆದೇಶವಾಗಿರುತ್ತದೆ. ಆದ್ದರಿಂದ ಕಾನೂನು ಪಾಲಿಸುವಲ್ಲಿ ಸಹಕರಿಸಬೇಕಾಗಿ ಕೋರಿದರು. ಗಣಪತಿ ಪ್ರತಿಷ್ಠಾಪನೆ ಮಾಡುವ ಮೊದಲು ಈ ಕೆಳಕಂಡ ವಿಷಯಗಳ ಕುರಿತು ಕ್ರಮ ಕೈಗೊಳ್ಳತಕ್ಕದ್ದೆಂದು ತಿಳಿಸಿದರು.
- ಸ್ಥಳವು ಸಾರ್ವಜನಿಕ ಜಾಗವಾಗಿದ್ದಲ್ಲಿ ಸ್ಥಳಿಯಾಡಳಿತದಿಂದ ಹಾಗೂ ಖಾಸಗೀ ಜಾಗವಾಗಿದ್ದಲ್ಲಿ ಜಾಗದ ಮಾಲಿಕರಿಂದ ಅನುಮತಿ ಪತ್ರ ಪಡೆಯತಕ್ಕದ್ದು.
- ಮೆಸ್ಕಾಂ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯತಕ್ಕದ್ದು
- ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯತಕ್ಕದ್ದು
- ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಅಳವಡಿಸುವ ಸಂಬಂಧ ಸ್ಥಳಿಯಾಡಳಿತದಿಂದ ಅನುಮತಿ ಪತ್ರ ಪಡೆಯತಕ್ಕದ್ದು
ಎಲ್ಲಾ ನಿರಾಕ್ಷೇಪಣಾ ಪತ್ರಗಳ ಪ್ರತಿಗಳನ್ನು ಹತ್ತಿರದ ಪೊಲಿಸ್ ಠಾಣೆಗೆ ಸಲ್ಲಿಸಬೇಕು. ಹಾಗು ನಿರಾಕ್ಷೇಪಣಾ ಪತ್ರಗಳಲ್ಲಿ ನೀಡಲಾಗಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
- ವಿಸರ್ಜನಾ ಮೆರವಣಿಗೆಯ ಮಾರ್ಗದ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅವರಿಂದ ಅನುಮತಿ ಪಡೆಯತಕ್ಕದ್ದು,
- ಪೆಂಡಾಲ್ ಸುರಕ್ಷತೆಯ ಬಗ್ಗೆ ಹಾಗೂ ಮೆರವಣಿಗೆ ಸುರಕ್ಷತೆಯ ಬಗ್ಗೆ ಸ್ವಯಂ ಸೇವಕರನ್ನು ನೇಮಕ ಮಾಡಿ ಅವರ ವಿವರವನ್ನು ಪೋಲಿಸ್ ಠಾಣೆಗೆ ಸಲ್ಲಿಸಬೇಕು. ಸದ್ರಿ ಸ್ವಯಂ ಸೇವಕರು ಪೆಂಡಾಲ್‍ನಲ್ಲಿ ಎಲ್ಲಾ ಸಮಯದಲ್ಲಿಯೂ ಕಡ್ಡಾಯವಾಗಿ ಇರತಕ್ಕದ್ದು.
- ಪೆಂಡಾಲ್‍ನಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು.
- ಪೆಂಡಾಲ್‍ನಲ್ಲಿ ಅಡುಗೆ ಮಾಡಬಾರದು ಹಾಗೂ ಸ್ವಚ್ಛತೆಯ ಬಗ್ಗೆ ಗಮನ ಹರಿಸತಕ್ಕದ್ದು.
- ಮೂರ್ತಿ ವಿಸರ್ಜನೆ ಮೆರವಣಿಗೆಯನ್ನು ಸರಿಯಾದ ಸಮಯಕ್ಕೆ ಪ್ರಾರಂಭಿಸತಕ್ಕದ್ದು ಹಾಗೂ ರಾತ್ರಿ 10.00 ಗಂಟೆಯೊಳಗಾಗಿ ಮುಗಿಸತಕ್ಕದ್ದು, ಇಲ್ಲವಾದಲ್ಲಿ ಇದರಿಂದ ಕಳ್ಳತನ/ಅಪಘಾತ ಇಂತಹ ಅಹಿತಕರ ಘಟನೆಗಳು ಉಂಟಾಗುವ ಸಂಭವವಿರುತ್ತದೆ. ಮೆರವಣಿಗೆ ಸಮಯದಲ್ಲಿ ತಾಂತ್ರಿಕ ಕಾರಣಗಳಿಂದ ತೊಂದರೆ ಉಂಟಾಗುವುದನ್ನು ತಡೆಯಲು ಹೆಚ್ಚುವರಿ ಬದಲಿ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳತಕ್ಕದ್ದು.
- ಗಣಪತಿ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವ ಸಮಯದಲ್ಲಿ ಜಾಗ್ರತೆ ವಹಿಸತಕ್ಕದ್ದು, ಇದಕ್ಕಾಗಿ ಈಜುಗಾರರು, ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳತಕ್ಕದ್ದು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ಇವರು ಮಾತನಾಡಿ ಗಣೇಶೊತ್ಸವವನ್ನು ಉತ್ತಮ ರೀತಿಯಿಂದ ಶಾಂತಿಯುತವಾಗಿ ನಡೆಸುವಂತೆ ಮನವಿ ಮಾಡಿದರು. ಬ್ಯಾನರ್, ಬಂಟಿಂಗ್ಸ್‍ಗಳನ್ನು ತಕ್ಕ ಸಮಯದಲ್ಲಿ ತೆರವುಗೊಳಿಸುವಂತೆ ತಿಳಿಸಿದರು. ಮೆರವಣಿಗೆಯ ಸಮಯದಲ್ಲಿ ಇದರಲ್ಲಿ ಪಾಲ್ಗೊಳ್ಳುವವರು ಕುಡಿದು ಗಲಾಟೆ ಮಾಡದಂತೆ ಆಯೋಜಕರು ಎಲ್ಲರಿಗೂ ಎಚ್ಚರಿಸುವಂತೆ ತಿಳಿಸಿದರು. ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವ ಸಮಯದಲ್ಲಿ ಈ ಮೊದಲೇ ನಿರ್ಧರಿಸಿದವರು ಮಾತ್ರ ನೀರಿಗೆ ಇಳಿಯಲು ಅವಕಾಶ ನೀಡುವಂತೆ ಕ್ರಮ ಕೈಗೊಳ್ಳಬೇಕಾಗಿ ಆಯೋಜಕರಿಗೆ ತಿಳಿಸಿದರು.