ಅಪ್ಪ ಮಗನ ಅಪೂರ್ವ ಸಂಗಮದ ಪೋಸ್ಟರ್; ಚಿತ್ರ ಕ್ಕೆ ತೆರಿಗೆ ವಿನಾಯಿತಿ; ಗಂಧದಗುಡಿ ಎಲ್ಲಾ ದಾಖಲೆಗಳನ್ನೂ ಪುಡಿಗಟ್ಟಲಿ ಎಂದ ಯಶ್

ಬೆಂಗಳೂರು: ಸಸ್ಯ ಮತ್ತು ಪ್ರಾಣಿಗಳ ರಕ್ಷಣೆ ಮತ್ತು ಸಂರಕ್ಷಣೆಯನ್ನು ಆಧರಿಸಿದ ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಕನ್ನಡ ಸಾಕ್ಷ್ಯಚಿತ್ರ ‘ಗಂಧದ ಗುಡಿ’ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇದು ಅಪ್ಪು ನಟನೆಯ ಕೊನೆಯ ಚಿತ್ರವಾಗಿದೆ. ಈ ಮಧ್ಯೆ ಅಪ್ಪು ಮತ್ತು ವರನಟ ಡಾ. ರಾಜ್ ಕುಮಾರ್ ಅವರ ಚಿತ್ರಗಳನ್ನೊಳಗೊಂಡ ಪೋಸ್ಟರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅಪ್ಪ-ಮಗ ಇಬ್ಬರೂ ಗಂಧದಗುಡಿ ಎನ್ನುವ ಹೆಸರಿನ ಚಿತ್ರದಲ್ಲಿ ನಟಿಸಿದ್ದು, ದುರಾದೃಷ್ಟವಶಾತ್ ಈ ಇಬ್ಬರೂ ಈಗ ನಮ್ಮ ಜೊತೆಗಿಲ್ಲ.

ಗಂದಧ ಗುಡಿ ಚಿತ್ರದ ಬಿಡುಗಡೆ ಪೂರ್ವ ‘ಪುನೀತ ಪರ್ವ’ ಸಮಾರಂಭದಲ್ಲಿ ಭಾಗವಹಿಸಿದ ಬೊಮ್ಮಾಯಿ, ‘ಅಪ್ಪು’ ಜೀವಂತವಾಗಿದ್ದಾರೆ ಎಂಬ ಭಾವನೆಯನ್ನು ನೀಡುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತೋಷವಾಗಿದೆ. ಗಂಧದ ಗುಡಿ ಚಲನಚಿತ್ರ ನಿಸರ್ಗ ಮತ್ತು ಅದರ ರಕ್ಷಣೆ ಕುರಿತಾಗಿರುವ ಚಲನಚಿತ್ರವಾಗಿರುವುದರಿಂದ ಇಂದಿನ ಕಾಲದಲ್ಲಿ ನಿಸರ್ಗ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ಬದುಕಿದ್ರೆ ಅಪ್ಪು ತರ ಇರಬೇಕು, ಪುನೀತ ಪರ್ವ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾವುಕ!

ಪುನೀತ ಪರ್ವದಲ್ಲಿ ಮಾತನಾಡಿದ ರಾಕಿ ಭಾಯಿ ಖ್ಯಾತಿಯ ಯಶ್ ಮಾತನಾಡಿ, ಗಂಧದ ಗುಡಿ ಸಿನಿಮಾ ಎಲ್ಲಾ ದಾಖಲೆಗಳನ್ನು ಮುರಿಯಬೇಕು. ಕೆ.ಜಿ.ಎಫ್ ದಾಖಲೆಗಳನ್ನೂ ಇದು ಮುರಿಯಬೇಕು. ಪ್ರತಿಮನೆಯಲ್ಲೂ ಎಲ್ಲರೂ ಈ ಚಿತ್ರವನ್ನು ವೀಕ್ಷಿಸಬೇಕು ಎಂದರು.

ರಿಷಭ್ ಶೆಟ್ಟಿ ಕಾರ್ಯಕ್ರಮಕ್ಕೆ ಗೈರಾಗಿದ್ದು, ಪೂರ್ವನಿರ್ಧಾರಿತ ಕಾರ್ಯಕ್ರಮವೊಂದಕ್ಕಾಗಿ ಬಹ್ರೇನ್‌ನಲ್ಲಿರುವ ಕಾರಣ, ‘ಪುನೀತಪರ್ವ’ದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮ ಲೈವ್ ನೋಡುತ್ತಾ ಕಣ್ತುಂಬಿ ಬಂದವು. ನಾನೂ ಅಲ್ಲಿ, ಆ ನೆನಪುಗಳ ನಡುವೆ ಇರಬೇಕಿತ್ತು ಎನ್ನಿಸಿತು. ಅಪ್ಪು ಸರ್ ಕ್ಷಮೆಯಿರಲಿ. ಮೊದಲ ದಿನವೇ ಗಂಧದಗುಡಿಯಲ್ಲಿ ಭೇಟಿಯಾಗೋಣಾ ಎಂದು ಟ್ವೀಟ್ ಮಾಡಿದ್ದಾರೆ.

ಪುನೀತ ಪರ್ವದಲ್ಲಿ ಸಚಿವರಾದ ಅಶ್ವಥ ನಾರಾಯಣ್, ಆನಂದ್ ಸಿಂಗ್, ದಕ್ಷಿಣ ಭಾರತದ ಘಟಾನುಘಟಿ ನಟರಾದ ಸೂರ್ಯ, ಪ್ರಕಾಶ್ ರಾಜ್ , ಸಪ್ತಮಿ ಗೌಡ, ರಾಧಿಕಾ ಪಂಡಿತ್, ಸಿದ್ದಾರ್ಥ್, ರಕ್ಷಿತ್ ಶೆಟ್ಟಿ, ಅನು ಪ್ರಭಾಕರ್, ರಾಣಾ ದಗ್ಗುಬಾಟಿ ಇನ್ನೂ ಹಲವು ನಟ ನಿರ್ದೇಶಕ ಮತ್ತು ನಿರ್ಮಾಪಕರು ಭಾಗವಹಿಸಿದ್ದರು.