ಗಾನಕೋಗಿಲೆ ಲತಾ ಮಂಗೇಡ್ಕರ್ ಜನ್ಮದಿನ: ಪ್ರಧಾನಿ ಮೋದಿ ಭಾವಪೂರ್ಣ ನಮನ

ನವದೆಹಲಿ: ಭಾರತೀಯ ಚಿತ್ರರಂಗದ ದಂತಕಥೆ, ಭಾರತ ರತ್ನ ಪುರಸ್ಕೃತೆ ದಿವಂಗತ ಲತಾ ಮಂಗೇಡ್ಕರ್ ಅವರ ಜನ್ಮದಿನ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅದ್ಭುತ ಗಾಯಕಿಗೆ ಹೃತ್ತೂರ್ವಕ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಭಾರತೀಯ ಸಂಗೀತ ಕ್ಷೇತ್ರಕ್ಕೆ ಲತಾ ದೀದಿ ನೀಡಿದ ಅಪಾರ ಕೊಡುಗೆಯು ಮುಂಬರುವ ಪೀಳಿಗೆಗೂ ಎಂದಿಗೂ ಅಮರವಾಗಿರುತ್ತದೆ ಎಂದು ಪ್ರಧಾನಿ ಸ್ಮರಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ದಿವ್ಯ ಗಾಯನ ಶಕ್ತಿಯಿಂದ ದೇಶದ ಹೆಸರನ್ನು ಜಗತ್ತಿನಾದ್ಯಂತ ಬೆಳಗಿಸಿದ ಪೂಜನೀಯ ಲತಾ ದೀದಿಯವರ ಜನ್ಮದಿನದಂದು ಅವರಿಗೆ ನನ್ನ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಲತಾ ಮಂಗೇಡ್ಕ‌ರ್ ಅವರು ಕೇವಲ ತಮ್ಮ ಮಧುರ ಕಂಠದಿಂದ ಭಾರತೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದು ಮಾತ್ರವಲ್ಲದೆ, ದೇಶದ ಪ್ರಗತಿ ಮತ್ತು ಸಮೃದ್ಧಿಗೆ ಸಂಬಂಧಿಸಿದ ಪ್ರತಿಯೊಂದು ಕಾರ್ಯಕ್ರಮ ಹಾಗೂ ಉಪಕ್ರಮಗಳಿಗೂ ನಿರಂತರವಾಗಿ ಬೆಂಬಲ ನೀಡುತ್ತಿದ್ದರು ಎಂದು ಮೋದಿ ನೆನಪಿಸಿಕೊಂಡಿದ್ದಾರೆ.
1929 ಸೆಪ್ಟೆಂಬರ್ 28 ರಂದು ಜನಿಸಿದ ಲತಾ ಮಂಗೇಶ್ವರ್ ಅವರು ಸಾವಿರಾರು ಚಲನಚಿತ್ರ ಗೀತೆಗಳ ಮೂಲಕ ಭಾರತದ ಪ್ರತಿಯೊಬ್ಬ ಸಂಗೀತ ಪ್ರೇಮಿಯ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದರು. 2022 ಫೆಬ್ರವರಿ 6 ರಂದು ಅನಾರೋಗ್ಯದಿಂದ ನಿಧನರಾದ ಅವರು, ತಮ್ಮ ಅಮರ ಗಾಯನ ಮತ್ತು ಕೊಡುಗೆಗಳ ಮೂಲಕ ದೇಶದ ಸಾಂಸ್ಕೃತಿಕ ಪರಂಪರೆಯಲ್ಲಿ ಎಂದಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ.