♥ ನಿಧಿ ಎನ್. ಪೈ
ಮಹೇಂದ್ರ ಸಿಂಗ್ ಧೋನಿಯವರ ಹುಟ್ಟುಹಬ್ಬ ಬಂದಾಗ ನನಗೆ ನಮ್ಮ ಗಲ್ಲಿ ಕ್ರಿಕೆಟ್ ಜ್ಞಾಪಕಕ್ಕೆ ಬಂತು. ನಾವು ಆಡುತ್ತಿದ್ದದ್ದು ಸುಮಾರು 2009ರ ಸಮಯದಲ್ಲಿ. ಆಗಷ್ಟೇ ಐಪಿಎಲ್ ಆವೃತ್ತಿ ಪ್ರಾರಂಭವಾಗಿತ್ತು. ಅವಾಗ ನನಗೆ ಒಂಬತ್ತು ವರ್ಷ. ಕ್ರಿಕೆಟ್ ಬಗ್ಗೆ ಏನೂ ಗೊತ್ತಿರಲಿಲ್ಲ ನನ್ನ ಅಣ್ಣಂದಿರಿಗೆ ಕ್ರಿಕೆಟ್ ಬಿಟ್ಟು ಬೇರೆನೂ ಗೊತ್ತಿರಲಿಲ್ಲ. ಅವಾಗ PUB G ಎಲ್ಲ ಇರ್ಲಿಲ್ಲ ನೋಡಿ, ಹಾಗಾಗಿ ಹೊರಗೆ ಆಡುವುದೇ ಹೆಚ್ಚಾಗಿತ್ತು.
ಎಲ್ಲಾ ಹುಡುಗಿಯರ ಹಾಗೆ ನಾನು ಕೂಡ ಅಡುಗೆ ಆಟ, ಅಕ್ಕ ತಂಗಿ ಆಟ, ಮಣ್ಣಿನ ಆಟ ಗೊಂಬೆ ಮಾಡುವ ಆಟವನ್ನೆಲ್ಲಾ ಆಡುತ್ತಲೇ ಇದ್ದೆ. ಅಜ್ಜಿ ಮನೆಯಲ್ಲಿ ಮನೆತುಂಬ ಅಣ್ಣಂದಿರು. ಅವರು ಜಪ್ಪಯ್ಯ ಅಂದ್ರು ಈ ಆಟಕ್ಕೆಲ್ಲಾ ಬರ್ತಾ ಇರಲಿಲ್ಲ. ಕಡೆಗೆ ನಾನೇ ಅವರಾಡುವ ಕ್ರಿಕೆಟ್ ಆಟದ ಗುಂಗಿಗೆ ಬಿದ್ದೆ. ಅವರಿಗೆ ಬೌಲಿಂಗ್ ಮಾಡೋಕೆ ಹೋಗಬೇಕಿತ್ತು. ನಂಗೆ ಏನೇ ಅಂದ್ರು ಬೌಲಿಂಗ್ ಮಾತ್ರ ಕೊಡ್ತಾ ಇದ್ರು.ಬೌಲಿಂಗ್ ಮಾಡುವುದರಲ್ಲೇ ನಾನೊಂದಷ್ಟು ಎಕ್ಸ್ ಪರ್ಟ್ ಆಗಿದ್ದು ಆಗಲೇ.
ನಂಗೆ ಬ್ಯಾಟಿಂಗ್ ಇಷ್ಟ ಅಂದ್ರು ಬ್ಯಾಟಿಂಗ್ ಸಿಗುವುದು ಅಸಾಧ್ಯವಾಗಿತ್ತು. ಬ್ಯಾಟಿಂಗ್ ಅಣ್ಣಂದಿರೆ ಮಾಡೋದು.ಉಳಿದ ಸಮಯದಲ್ಲಿಯೂ ಅವರಿಗೆ ಗಾಳಿಯಲ್ಲಿ ಬ್ಯಾಟಿಂಗ್ ಮಾಡುವ ಹುಚ್ಚು. ರಸ್ತೆಯಲ್ಲಿ ಹೋಗುವಾಗಲೂ ಗಾಳಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ನಾನು ಮಾತ್ರ ಬೌಲಿಂಗ್ ನಲ್ಲಿ, ಫೀಲ್ಡಿಂಗ್ ನಲ್ಲಿ ತೃಪ್ತಿ ಪಡಬೇಕಿತ್ತು.
ನಾನು ನನ್ನ ಸ್ವರ ಎತ್ತಿ ನನಗೂ ಬ್ಯಾಟಿಂಗ್ ಕೊಡಿ ಅಂದ್ರೆ ನನ್ನನ್ನು ಔಟ್ ಮಾಡ್ತಾ ಇದ್ರು. ಇಲ್ಲವೇ ನಮಗೆ ಸಾಕಾಯ್ತು ಅಥವಾ ಕತ್ತಲಾಯಿತು ಅನ್ನೋ ನೆಪ ಹೇಳಿ ಓಡಿ ಹೋಗುತ್ತಿದ್ದರು. ನನಗೂ ಬ್ಯಾಟಿಂಗ್ ಬರ್ತಾ ಇರ್ಲಿಲ್ಲ ಬಿಡಿ ಅದು ಬೇರೆ ವಿಷ್.
♥ಇಷ್ಟೊಂದೆಲ್ಲಾ ರೂಲ್ಸ್ ಗಳು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲೂ ಇರಲ್ವಾ ಅಂತ !
ನಮ್ಮ ಗಲ್ಲಿ ಕ್ರಿಕೆಟ್ ಪಂದ್ಯಾಟಗಳು ಆಗ್ತಾ ಇದ್ದಿದ್ದು ಅಜ್ಜಿ ಮನೆ ಅಂಗಳದಲ್ಲಿ. ರಸ್ತೆಗೆ ಬಾಲ್ ಬಾರಿಸಿದರೆ ಔಟ್ ಎಂದು ತೀರ್ಮಾನ. ಎಲ್ಲರಿಗೂ ಮೊದಲನೇ ಬಾಲು ಟ್ರಯಲ್ ಬೇಕೇಬೇಕಿತ್ತು. ಸಿಕ್ಸ್ ಹೊಡೆಯಂಗಿಲ್ಲ ಹೊಡೆದರೆ ಅದು ಔಟ್ ಅಷ್ಟೇ. ಬಾಲ್ ತಾರಸಿಗೆ ಹೋದರೆ ಬ್ಯಾಟ್ಸ್ ಮ್ಯಾನ್ ತರಬೇಕು. ಬಾಲ್ ಚರಂಡಿಗೆ ಹಾಕಿದರೆ ಅವರೇ ತೊಳಿಬೇಕು. ಛೆ ಛೆ ಇಷ್ಟೆಲ್ಲಾ ರೂಲ್ಸು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಇರಲ್ಲ ಅಂದುಕೊಳ್ಳುತ್ತಿದ್ದೆ.
ಬ್ಯಾಟ್ಸ್ ಮ್ಯಾನ್ ಎಲ್ಲಾ ಕೆಲಸ ಮಾಡಬೇಕು. ಆದ್ರೂ ಎಲ್ಲರಿಗೂ ಇಲ್ಲಿ ಬ್ಯಾಟಿಂಗೇ ಬೇಕು. ಬ್ಯಾಟ್ ಇಟ್ಕೊಂಡ್ರೆ ಸಾಕು ನಾವೇ ಧೋನಿ ಅನ್ನೋ ರೇಂಜಿಗೆ ಬಿಲ್ಡಪ್ ತಗೊಂಡಿದ್ವಿ. ಇನ್ನು ನಮಗೆ ಗೊತ್ತಿದ್ದ ಅಲ್ಪಸ್ವಲ್ಪ ಇಂಗ್ಲಿಷ್ನಲ್ಲಿ ಕಮೆಂಟರಿ ಕೊಡ್ತಾ ಇದ್ವಿ.
ಧೋನಿ ತರ ಬ್ಯಾಟ್ ಬೀಸೋಕೆ ಹೋಗಿ ಔಟಾಗಿದ್ದು ಇದೆ. ಮಧ್ಯದಲ್ಲಿ ಸಣ್ಣ ಪುಟ್ಟ ಜಗಳ ಮಾಡಿಕೊಂಡು ಮತ್ತೆ ಸಂಜೆ ಮನೆಗೆ ಹೋಗಿ ರಾಜಿ ಮಾಡ್ಕೋತಾ ಇದ್ವಿ. ಈಗ ನಮ್ಮ ಗಲ್ಲಿ ಕ್ರಿಕೆಟ್ ನೆನಪಿಸಿಕೊಂಡರೆ ಖುಷಿಯಾಗುತ್ತೆ. ಇವಾಗ್ಲೂ ಟಿವಿಯಲ್ಲಿ ವಿಶ್ವ ಕಪ್ ಬಂದಾಗ, ಐಪಿಎಲ್ ಬಂದಾಗ ನಾವು ಆಡಿದ ಗಲ್ಲಿ ಕ್ರಿಕೆಟ್ ನೆನಪಾಗುತ್ತೆ. ಅಜ್ಜಿ ಮನೆ ಅಂಗಳ ನೋಡಿದಾಗ ಪ್ರತಿ ಮೂಲೆಯಲ್ಲೂ ಔಟಾಗಿದ್ದು, ಅಕಸ್ಮಾತಾಗಿ ಜಾರಿ ಬಿದ್ದಿದ್ದು, ಕಷ್ಟಪಟ್ಟು ಗೆದ್ದಿದ್ದು ಎದ್ನೋ ಬಿದ್ನೋ ಎಂಬಂತೆ ಓಡಿದ್ದು ಎಲ್ಲವೂ ಮನಸ್ಸಿನಲ್ಲೇ ಕಾಣಿಸುತ್ತದೆ. ಈಗ್ಲೂ ಅಜ್ಜಿ ಮನೆ ಅಂಗಳ ಹಾಗೇ ಇದೆ. ಆದರೆ ಕ್ರಿಕೆಟ್ ಆಡುವವರು ಇಲ್ಲ ಅಷ್ಟೇ.