ಗಾಜಿಯಾಬಾದ್: ಗಾಜಿಯಾಬಾದ್ ನಲ್ಲಿ ಆ.18ರಂದು ರಸ್ತೆಗೆ ಅಡ್ಡ ಬಂದ ಬೀದಿ ನಾಯಿಯನ್ನು ರಕ್ಷಿಸಲು ಹೋಗಿ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಬ್ ಇನ್ಸ್‌ಪೆಕ್ಟರ್ ರಿಚಾ ಸಚನ್ (25). ರಿಚಾ ಅವರು ಕಾನ್ಪುರ ನಿವಾಸಿಯಾಗಿದ್ದು, ಇವರು ಸೋಮವಾರ ಕರ್ತವ್ಯ ಮುಗಿಸಿ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬೀದಿ ನಾಯಿಯೊಂದು ರಸ್ತೆಗೆ ಅಡ್ಡ ಬಂದಿದೆ ಈ ವೇಳೆ ನಾಯಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಒಮ್ಮೆಲೇ ಬ್ರೇಕ್ ಹಾಕಿದ್ದಾರೆ ಪರಿಣಾಮ ವಾಹನ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ ಇದರೊಂದಿಗೆ ರಿಚಾ ಕೂಡಾ ರಸ್ತೆಗೆ ಬಿದ್ದಿದ್ದಾರೆ ಅದೇ ಸಮಯದಲ್ಲಿ ವೇಗವಾಗಿ ಬಂದ ಕಾರು ರಿಚಾ ಅವರಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ರಿಚಾ ಅವರು 2023 ರಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಗಾಜಿಯಾಬಾದ್ ನಲ್ಲಿರುವ ಶಾಸ್ತ್ರಿ ನಗರ ಹೊರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಿಚಾ ಯುಪಿಎಸ್‌ಸಿ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದರು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












