ವೀಕೆಂಡ್ ಕರ್ಫ್ಯೂ ಭವಿಷ್ಯ ನಾಳೆ ನಿರ್ಧಾರ: ಸಿಎಂ

ಬೆಂಗಳೂರು: 10-12 ದಿನಗಳ ಕಾಲ ಕ್ವಾರಂಟೈನ್ ಇದ್ದು ಕೋವಿಡ್ ನೆಗೆಟಿವ್ ವರದಿ ಬಂದಿದ್ದು ಇದೀಗ ಸಂಪೂರ್ಣ ಗುಣಮುಖನಾಗಿರುವುದರಿಂದ ಇಂದು ಬುಧವಾರದಿಂದ ದೈನಂದಿನ ಕೆಲಸ ಕಾರ್ಯಗಳು ಕಚೇರಿಯಲ್ಲಿ ಮುಂದುವರಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಿನ್ನೆ ಜಿಲ್ಲಾಧಿಕಾರಿಗಳ ಸಭೆಯನ್ನು ವರ್ಚುವಲ್ ಮಾಡಲಾಗಿದ್ದು, ಯಾವ ಜಿಲ್ಲೆಗಳಲ್ಲಿ ಕೋವಿಡ್ ಲಸಿಕೆಯ ಕೊರತೆಯಿದೆಯೋ ಅಲ್ಲಿ ಲಸಿಕೆ ಪ್ರಮಾಣ ಹೆಚ್ಚು ಮಾಡಬೇಕೆಂದು ವಿಶೇಷವಾಗಿ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದು, ಕೋವಿಡ್ ವಾರಿಯರ್ಸ್ ಗೆ ಇನ್ನಷ್ಟು ತೀವ್ರಗತಿಯಲ್ಲಿ ನೀಡುವುದು ಸರ್ಕಾರದ ಆದ್ಯತೆಯಾಗಿದೆ ಎಂದರು.

ಶುಕ್ರವಾರ ನಿರ್ಧಾರ: ವೀಕೆಂಡ್ ಕರ್ಫ್ಯೂ (Weekend curfew) ಬೇಡ, ವ್ಯಾಪಾರ-ವಹಿವಾಟು ನಮ್ಮ ಬದುಕಿಗೆ ಬಹಳ ಕಷ್ಟವಾಗುತ್ತಿದೆ ಎಂದು ಈಗಾಗಲೇ ಹಲವರು ವಿರೋಧ ವ್ಯಕ್ತಪಡಿಸಿ ಸರ್ಕಾರಕ್ಕೆ ಬಹಳ ಒತ್ತಡ ಹಾಕುತ್ತಿದ್ದಾರೆ. ಒಂದೆಡೆ ಕೋವಿಡ್ ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಮುಂದುವರಿಸಬೇಕಾ ಅಥವಾ ರದ್ದುಪಡಿಸಬೇಕಾ ಎಂಬ ಗೊಂದಲದಲ್ಲಿ ಸರ್ಕಾರವಿದೆ.

ಹೀಗಿರುವಾಗ ಇನ್ನೆರಡು ದಿನಗಳಲ್ಲಿ ತಜ್ಞರು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ, ನಮ್ಮ ರಾಜ್ಯದ ಜಿಲ್ಲೆಗಳಲ್ಲಿನ ಸ್ಥಿತಿಗತಿ ನೋಡಿಕೊಂಡು ವರದಿ ತಯಾರಿಸುತ್ತಿದ್ದಾರೆ. ಅವರು ಶುಕ್ರವಾರ ವರದಿ ನೀಡಲಿದ್ದು ಅದರ ಆಧಾರದ ಮೇಲೆ ಚರ್ಚೆ ಮಾಡಿ ಅಂದೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.