ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸುವ ಭಾರತದ ಪ್ರಯತ್ನಕ್ಕೆ ಮಹತ್ವದ ಯಶಸ್ಸು ದೊರೆತಿದೆ. ಶೇ.100ರಷ್ಟು ಭಾರತೀಯ ಕಚ್ಚಾವಸ್ತು ಹಾಗೂ ಸ್ವದೇಶಿ ಬಿಡಿಭಾಗಗಳಿಂದ ನಿರ್ಮಿಸಲಾದ ಅತ್ಯಾಧುನಿಕ ಎಕೆ-203 ಅಸಾಲ್ಟ್ ರೈಫಲ್‌ನ ಮೊದಲ ಆವೃತ್ತಿಯ ಫೈರಿಂಗ್ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಉತ್ತರ ಪ್ರದೇಶದ ಅಮೇಥಿಯ ಕೋರ್ವಾ ಆರ್ಡನೆನ್ಸ್ ಕಾರ್ಖಾನೆಯಲ್ಲಿ ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ (IRRPL) ಸಂಸ್ಥೆಯು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಈ ರೈಫಲ್ ಅನ್ನು ಸಂಪೂರ್ಣವಾಗಿ ದೇಶೀಯವಾಗಿ ತಯಾರಿಸಿದೆ. ಸ್ವದೇಶಿ ಮಾದರಿಯ ಈ ರೈಫಲ್‌ಗೆ ‘ಶೇರ್’ ಎಂದು ಹೆಸರಿಸಲಾಗಿದೆ.
ಏನಿದರ ವಿಶೇಷತೆ?
ಎಕೆ-203 ರೈಫಲ್‌ನ ಪ್ರತಿಯೊಂದು ಬಿಡಿಭಾಗ ಹಾಗೂ ಕಚ್ಚಾವಸ್ತುವನ್ನು ಭಾರತೀಯ ಉದ್ಯಮಗಳಿಂದಲೇ ಸಂಗ್ರಹಿಸಲಾಗಿದೆ. ಇದು ಗ್ಯಾಸ್ ಆಧಾರಿತ 7.62×39 ಮಿಮೀ ಸಾಮರ್ಥ್ಯದ ಅಸಾಲ್ಟ್ ರೈಫಲ್ ಆಗಿದ್ದು, ನಿಮಿಷಕ್ಕೆ ಸುಮಾರು 700 ಸುತ್ತು ಗುಂಡು ಹಾರಿಸುವ ಸಾಮರ್ಥ್ಯ ಹೊಂದಿದೆ. ಸುಮಾರು 800 ಮೀಟರ್‌ವರೆಗೆ ಗುರಿ ತಲುಪುವ ಸಾಮರ್ಥ್ಯ ಇದಕ್ಕಿದೆ.
ಶೀಘ್ರದಲ್ಲೇ ಪ್ರತಿ 100 ಸೆಕೆಂಡ್‌ಗೆ ಒಂದು ಎಕೆ-203 ರೈಫಲ್ ತಯಾರಿಸುವ ಬೃಹತ್ ಉತ್ಪಾದನಾ ಗುರಿಯನ್ನು ಸಂಸ್ಥೆ ಹೊಂದಿದೆ.
ಭಾರತೀಯ ಸೇನೆಯಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಹಳೆಯ ಇನ್ಸಾಸ್ (INSAS) ರೈಫಲ್‌ಗಳ ಬದಲಿಗೆ ಹಂತ ಹಂತವಾಗಿ 6 ಲಕ್ಷಕ್ಕೂ ಅಧಿಕ ಎಕೆ-203 ರೈಫಲ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ.
ಸಂಪೂರ್ಣ ಭಾರತೀಯ ಮಾದರಿಯ ಪ್ರೋಟೋಟೈಪ್ ರೈಫಲ್‌ಗಳನ್ನು ಸೆಪ್ಟೆಂಬರ್ 2026ರ ವೇಳೆಗೆ ಸೇನಾ ಪರೀಕ್ಷಾರ್ಥ ಪ್ರಯೋಗಗಳಿಗೆ ಹಸ್ತಾಂತರಿಸಲಾಗುವುದು ಎಂದು ಸಂಸ್ಥೆಯ ಸಿಇಒ ಹಾಗೂ ಎಂಡಿ ಮೇಜರ್ ಜನರಲ್ ಎಸ್.ಕೆ. ಶರ್ಮಾ ತಿಳಿಸಿದ್ದಾರೆ.















