ಉಳ್ಳಾಲದ ರಾಣಿ ಅಬ್ಬಕ್ಕನಿಂದ ಆಜಾದ್ ಹಿಂದ್ ಫೌಜ್ ವರೆಗೆ ಸಹಸ್ರ ಸಹಸ್ರ ದೇಶಪ್ರೇಮಿಗಳ ಬಲಿದಾನದ ಫಲವೇ 75ರ ಈ ಸ್ವಾತಂತ್ರ್ಯೋತ್ಸವ

16 ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ದ ಹೋರಾಡಿದ ಪ್ರಪ್ರಥಮ ಮಹಿಳೆ ವೀರ ರಾಣಿ ಅಬ್ಬಕ್ಕ, ಗೇರುಸೊಪ್ಪೆಯ ವೀರ ರಾಣಿ ಚೆನ್ನಭೈರಾದೇವಿ, ತದನಂತರ 1837 ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಸಮರ ಭಾರತದ ಸ್ವಾತಂತ್ರ್ಯ ಸಮರದ ಇತಿಹಾಸದಲ್ಲಿ ತುಳುನಾಡು ಅಥವಾ ಅವಿಭಜಿತ ದ.ಕ ಜಿಲ್ಲೆಯ ವೀರ ಮಹಿಳೆ ಮತ್ತು ಪುರುಷರ ಹೆಸರನ್ನು ಸ್ವರ್ಣಾಕ್ಷರಗಳಲ್ಲಿ ಬರೆದಿಡಬಹುದು.

ಬಹುತೇಕ ಹದಿನಾರನೇ ಶತಮಾನದಲ್ಲೇ ಶುರುವಾಗಿದ್ದ ಸ್ವಾತಂತ್ರ್ಯ ಸಮರ, ಮೊದಲು ಪೋರ್ಚುಗೀಸರ ವಿರುದ್ದ, ಡಚ್-ಫ್ರೆಂಚರ ವಿರುದ್ದ ತದನಂತರ ಬ್ರಿಟಿಷರ ವಿರುದ್ದ ತೀವ್ರವಾಗಿ ಸಹಸ್ರ ಸಹಸ್ರ ದೇಶಪ್ರೇಮಿಗಳ ಬಲಿದಾನದ ಫಲವಾಗಿ ಇಂದು ನಾವು 75 ರ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುವಂತಾಗಿದೆ.

1857 ರ ಮೊದಲನೆ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಸುಭಾಷ್ ಚಂದ್ರ ಬೋಸರ ಆಜಾದ್ ಹಿಂದ್ ಫೌಜ್ ವರೆಗೆ ಹಿರಿಯರು-ಕಿರಿಯರು, ಮಹಿಳೆಯರು-ಪುರುಷರು, ಜಾತಿ-ಧರ್ಮ-ಮತ-ಪಂಥ, ಭಾಷೆ-ಭೌಗೋಳಿಕತೆ ಎನ್ನುವ ಬೇಧವಿಲ್ಲದೆ ಎಲ್ಲರೂ ಸೇರಿ ಬ್ರಿಟಿಷರ ವಿರುದ್ದ ವೀರಾವೇಶದಿಂದ ಹೋರಾಡಿ ಬೆಲೆ ಕಟ್ಟಲಾಗದ ಸ್ವಾತಂತ್ರ್ಯದ ಸವಿಯನ್ನು ನಾವೆಲ್ಲರೂ ಅನುಭವಿಸುವಂತೆ ಮಾಡಿದ್ದಾರೆ.

ಸ್ವಾತಂತ್ರ್ಯಕ್ಕಾಗಿ ತಮ್ಮದೆನ್ನುವ ಎಲ್ಲವನ್ನೂ ಅರ್ಪಿಸಿದ ಆ ಎಲ್ಲಾ ಚೇತನಗಳಿಗೆ ತಲೆಬಾಗಿ ನಮಿಸುತ್ತೇವೆ. ಇಂದು ನಾವು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆಂದರೆ ಅವರ ಬಲಿದಾನ ಮತ್ತು ತ್ಯಾಗವೆ ಇದಕ್ಕೆ ಕಾರಣ. ಇಂತಹ ಗೊತ್ತಿರುವ ಮತ್ತು ಇತಿಹಾಸ ಪುಟದಲ್ಲಿ ಸ್ಥಾನವೇ ಸಿಗದೆ ಅಳಿಸಿ ಹೋಗಿರುವ ಆ ಎಲ್ಲಾ ಮಹಾನ್ ವೀರರಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತೇವೆ. ಸ್ವಾತಂತ್ರ್ಯವೆನ್ನುವುದು ಸ್ವೇಚ್ಛೆಯಲ್ಲ, ಅದು ಒಂದು ಮಹತ್ತರ ಜವಾಬ್ದಾರಿ. ದೇಶದ ಅಖಂಡತೆ ಮತ್ತು ಅಸ್ಮಿತೆಯನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಮತ್ತು ಅದನ್ನು ನಾವೆಲ್ಲರೂ ಸಮರ್ಥವಾಗಿ ನಿಭಾಯಿಸುತ್ತೇವೆ ಎನ್ನುವ ಭರವಸೆಯೊಂದಿಗೆ ಎಲ್ಲರಿಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯಗಳನ್ನು ಸಲ್ಲಿಸುತ್ತೇವೆ.

-ಉಡುಪಿ ಎಕ್ಸ್ ಪ್ರೆಸ್