ನವದೆಹಲಿ: ಮೋಟಾರು ವಾಹನ ಕಾಯ್ದೆಯ ಹೊಸ ನಿಯಮಗಳು ಇಂದಿನಿಂದ ಜಾರಿಗೆ ಬರುತ್ತಿದ್ದು, ವಾಹನ ಸವಾರರು ಇನ್ಮುಂದೆ ಚಾಲನಾ ಪರವಾನಗಿ (ಡಿಎಲ್) ಮತ್ತು ರೆಜಿಸ್ಟ್ರೇಷನ್ ಸರ್ಟಿಫಿಕೆಟ್ (ಆರ್ಸಿ) ಕಾರ್ಡ್ಗಳ ಬದಲು ಇ–ಕಾಪಿಗಳನ್ನು ತೋರಿಸಬಹುದಾಗಿದೆ.
ವಾಹನ ಸವಾರರು ಡಿಎಲ್ ಮತ್ತು ಆರ್ಸಿ ಕಾರ್ಡ್ಗಳನ್ನು ಜೊತೆಯಲ್ಲೇ ಇಟ್ಟುಕೊಳ್ಳುವ ಅಗತ್ಯವಿರುವುದಿಲ್ಲ. ಪರಿಶೀಲನೆ ಸಂದರ್ಭಗಳಲ್ಲಿ ಡಿಜಿಟಲ್ ಪ್ರತಿಗಳನ್ನು ತೋರಿಸಿದರೆ ಸಾಕು. ಕೇಂದ್ರ ಸರ್ಕಾರದ ಡಿಜಿ ಲಾಕರ್ ಅಥವಾ ಎಂ–ಪರಿವಹನ್ ರೀತಿಯ ಪೋರ್ಟಲ್ಗಳಿಗೆ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಂಡು, ಅಗತ್ಯವಾದಲ್ಲಿ ಡಿಜಿಟಲ್ ಪ್ರತಿಯನ್ನೇ ತೋರಿಸಬಹುದಾಗಿದೆ.
ಆಹಾರ ಪೊಟ್ಟಣಗಳಲ್ಲಿ ಕೊನೆಯ ದಿನಾಂಕ ಕಡ್ಡಾಯ:
ಸಿಹಿ ತಿನಿಸು ಮಾರಾಟ ಮಾಡುವ ಅಂಗಡಿಗಳಲ್ಲಿ ಪ್ಯಾಕ್ ಮಾಡದಿರುವ ತಿಂಡಿಗಳಿಗೆ ಬಳಸಬಹುದಾದ ಕೊನೆಯ ದಿನದ ಮಾಹಿತಿ ಫಲಕವನ್ನು ಕಡ್ಡಾಯವಾಗಿ ಹಾಕಬೇಕಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ಹೊಸ ನಿಯಮಗಳ ಅನ್ವಯ ಸಿಹಿ ಮಾರಾಟ ಅಂಗಡಿಗಳಲ್ಲಿ ಪ್ಯಾಕ್ ಮಾಡದಿರುವ ತಿಂಡಿಗಳಿಗೆ ‘ಬಳಸಬಹುದಾದ ಕೊನೆಯ ದಿನ’ ಪ್ರಕಟಿಸುವುದು ಕಡ್ಡಾಯ ಮಾಡಲಾಗಿದೆ. ಹಾಗೇ ಸಾಸಿವೆ ಎಣ್ಣೆ ಜೊತೆಗೆ ಇತರೆ ಯಾವುದೇ ಅಡುಗೆ ಎಣ್ಣೆ ಬೆರಕೆ ಮಾಡಿ ಬಳಸುವುದನ್ನು ನಿಷೇಧಿಸಲಾಗಿದೆ.
ಉಜ್ವಲ ಯೋಜನೆ ಸ್ಥಗಿತ:
ಬಡ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಒದಗಿಸಿರುವ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಸೆಪ್ಟೆಂಬರ್ 30ಕ್ಕೆ ಕೊನೆಯಾಗಿದೆ. ಫಲಾನುಭವಿಗಳು ಇನ್ನು ಮುಂದೆ ಗ್ಯಾಸ್ ಸಿಲಿಂಡರ್ಗಳನ್ನು ಖರೀದಿಸಬೇಕಾಗುತ್ತದೆ.