ಬೆಂಗಳೂರು: ರಾಜ್ಯದಲ್ಲಿ ನಡೆದ ಹಿಜಾಬ್ ಗದ್ದಲದಿಂದಾಗಿ 2022-23 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸಲು ಪ.ಪೂ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಸೋಮವಾರ ಬಿಡುಗಡೆ ಮಾಡಲಾದ ಇಲಾಖೆಯ ಪ್ರವೇಶ ಮಾರ್ಗಸೂಚಿಯಲ್ಲಿ ಸಮವಸ್ತ್ರದ ಬಗ್ಗೆ ಇದೇ ಮೊದಲ ಬಾರಿಗೆ ಉಲ್ಲೇಖಿಸಲಾಗಿದೆ.
ಮಾರ್ಗಸೂಚಿಗಳಲ್ಲಿ ತಿಳಿಸಿರುವಂತೆ ಪದವಿ ಪೂರ್ವ ವಿಶ್ವವಿದ್ಯಾಲಯದ ಮೊದಲನೇ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳು ಸಂಬಂಧಪಟ್ಟ ಕಾಲೇಜು ಅಭಿವೃದ್ಧಿ ಸಮಿತಿಗಳು(ಸಿಡಿಸಿ) ಸೂಚಿಸಿದ ಏಕರೂಪದ ಮಾನದಂಡಗಳಿಗೆ ಬದ್ದರಾಗಿರಬೇಕು.
ಇಲಾಖೆಯ ಸೂಚನೆಗಳ ಪ್ರಕಾರ, ವಿದ್ಯಾರ್ಥಿಗಳು ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟಿನ ಇತ್ತೀಚಿನ ಆದೇಶವನ್ನು ಪಾಲಿಸಬೇಕು. ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ಇಲಾಖೆಯು “ಮಾರ್ಚ್ 15 ರಂದು ಹೊರಡಿಸಿದ ಆದೇಶದಲ್ಲಿ ನ್ಯಾಯಾಲಯವು ಸಮವಸ್ತ್ರದ ಮೇಲಿನ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ಆಯಾ ಸಿಡಿಸಿಗಳು ಸೂಚಿಸಿದ ಸಮವಸ್ತ್ರಗಳಿಗೆ ಬದ್ದರಾಗಿರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ” ಎಂದು ಹೇಳಿದೆ.
ಒಂದು ವೇಳೆ ನಿಗದಿತ ಸಮವಸ್ತ್ರ ಇಲ್ಲದಿದ್ದಲ್ಲಿ ಅಂತಹ ಕಾಲೇಜುಗಳ ವಿದ್ಯಾರ್ಥಿಗಳು ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯಾಗದ ಉಡುಗೆ ತೊಡುಗೆಗಳನ್ನು ಧರಿಸಬೇಕು ಎಂದು ಇಲಾಖೆ ಉಲ್ಲೇಖಿಸಿದೆ.