ಪ್ರಿಯ ಸ್ನೇಹಿತರೇ, ಫ್ರೆಂಡ್ ಶಿಪ್ ಡೇ ಇವತ್ತಷ್ಟೇ ಅಲ್ಲ ಪ್ರತಿದಿನವೂ : ಹುಡುಗಿಯೊಬ್ಬಳ ಆಪ್ತ ಬರಹ

ಏಳು ಬೀಳುಗಳ ಸರಮಾಲೆಯಲ್ಲಿ ನಮ್ಮ ಈ ಗೆಳೆತನ ಬಂಧವು ಶಾಶ್ವತವಾದದ್ದು. ಗೆಳೆತನ ಎಂದೆಂದಿಗೂ ಶಾಶ್ವತವಾಗಿ ಜೀವಂತ ಇರಲಿ, ಆ ಕ್ಷಣಗಳನ್ನು ನಾವು ಎಂದಿಗೂ ಮರೆಯಬಾರದು. ಫ್ರೆಂಡ್‌ಶಿಪ್ ಕೂಡ ಬೇರೆಯವರನ್ನು ನಮ್ಮವರನ್ನಾಗಿ ಮಾಡುತ್ತೆ, ಸ್ನೇಹಕ್ಕೆ ಬಡವ-ಶ್ರೀಮಂತ, ಮೇಲು ಜಾತಿ-ಕೀಳುಜಾತಿ, ಬುದ್ಧಿವಂತ-ದಡ್ಡ, ದೊಡ್ಡವರು-ಚಿಕ್ಕವರು, ಅನ್ನೋ ಬಾರ್ಡರ್‌ ಇರುವುದಿಲ್ಲ. ಇಷ್ಟೇ ಅಲ್ಲದೇ ಮಳೆಗಾಲದಲ್ಲಿ ಒಂದೇ ಕೊಡೆಯಲಿ ಜೊತೆಯಾಗಿ ನಡೆದವರು, ತರಗತಿಯಲ್ಲಿ ತಪ್ಪು ಮಾಡಿ ಸಿಕ್ಕಿಬಿದ್ದು ಜೊತೆಯಲ್ಲಿ ನಿಂತವರು. ಲೈನ್ ಹೊಡೆಯುವಾಗ ಸಾಥ್‌ಕೊಟ್ಟವರು, ಮಾಸ್ ಬಂಕ್ ಮಾಡಲು ಪ್ಲಾನ್ ಮಾಡಿ ಕೊನೆಗೆ ಸಿಕ್ಕಿಹಾಕಿಕೊಂಡವರು, ವಿಪರೀತ ಸೆಲ್ಪಿಗೆ ಪೋಸ್‌ಕೊಟ್ಟು ಕೊನೆಗೆ ಮೇಡಮ್ ಬಾಯಲ್ಲಿ ಬೈಗುಳ ತಿಂದವರು ಇವೆಲ್ಲ ಬಂಧವೇ ಚೆಂದ.

 ಯಾರ ಬಳಿಯೂ ಹೇಳಲಾಗದನ್ನು ಫ್ರೆಂಡ್ ಬಳಿ ಹೇಳಿಕೊಳ್ತೇವೆ. ನಮ್ಮ ಇಷ್ಟ-ಕಷ್ಟಗಳಿಗೆ ಸ್ಪಂದಿಸುವ ಫ್ರೆಂಡ್‌ಶಿಪ್ ಅನ್ನೋ ಬಂಧನ ಎಲ್ಲರನ್ನೂಒಂದಾಗಿಸುತ್ತೆ, ಈ ಬಂಧನವೇ ರಕ್ತ ಸಂಬಂಧಕ್ಕಿಂತ ಮಿಗಿಲಾಗಿದ್ದು ಅನ್ನಿಸುತ್ತದೆ.

ಈ ಬಂಧನ:ಸ್ನೇಹದ ಸ್ಪಂದನ:

ಸ್ನೇಹಿತರಿಲ್ಲದ ನಮ್ಮ ಬಾಲ್ಯವನ್ನು ಶಾಲಾ ದಿನಗಳಲ್ಲಿ ನೆನಪಿಸಿಕೊಳ್ಳುವುದೇ ಅಸಾಧ್ಯ. ಸ್ನೇಹಿತರ ಗುಂಪಿನಲ್ಲಿ ಮಾಡೋ ಮಾಜಾ ಮಸ್ತಿ, ಕ್ಲಾಸ್‌ಟೈಮ್‌ಯಲ್ಲಿ ಮೇಡಮ್ ಕಾಲೆಳೆಯೋದು , ಅವರಿಗೆ ಕೊಡುತ್ತಿದ್ದ ಉಪಟಳಗಳು ಇದನೆಲ್ಲ ಒಮ್ಮೆ ನೆನಪಿಸಿಕೊಂಡರೆ ಗುಳಿಕೆನ್ನೆಯಲ್ಲಿ ಮುಗುಳು ನಗೆ ಏಳುತ್ತೆ. ಸಣ್ಣ ಪುಟ್ಟ ವಿಷಯಗಳಿಗೆ ಜಗಳ ಮಾಡಿ ಮತ್ತೆ ಒಂದಾಗುವುದು ಇವೆಲ್ಲ ಸ್ನೇಹದ ಚೆಂದ ಅನುಭವಗಳು.

ಆದರೂ ಒಂದು ಸ್ನೇಹ ಶುರು ಮಾಡುವ ಮೊದಲು ಬಹಳ ಸಲ ಯೋಚನೆ ಮಾಡಿ, ಹಾಗೇ ಸ್ನೇಹ ಮುರಿಯುವ ಮೊದಲು ಕೊಂಚ ಯೋಚಿಸಿ.

ಸಣ್ಣ ಪುಟ್ಟಕಾರಣಕ್ಕೆ ಸ್ನೇಹಿತರನ್ನು ದೂರ ಮಾಡಿಕೊಳ್ಳಬೇಡಿ, ಯಾಕೆಂದರೆ ಗೆಳೆತನಕ್ಕೆ ಎಷ್ಟೇ ಬೆಲೆ ಕೊಟ್ಟರು ಕೊಂಡುಕೊಳ್ಳಲಾಗದು. ಒಮ್ಮೆ ನಮ್ಮಿಂದ ದೂರ ಆದರು ಮತ್ತೆ ಅವರ ಗೆಳೆತನ ಸಿಗೋದು ತುಂಬಾ ಕಷ್ಟ.  ತಮಾಷೆ ,ತುಂಟಾಟ, ಜಗಳ.. ಇವೆಲ್ಲವು ದೇವರು ಕೊಟ್ಟ ಉಡುಗೊರೆ. ಪ್ರತಿಯೊಬ್ಬರ ಸ್ನೇಹವು ಚಿರಜೀವಿಯೇ ಹೌದು. ಇವತ್ತು ಫ್ರೆಂಡ್ಸ್ ಶಿಪ್ ಡೇ ಇದು ಬರೀ ಒಂದು ದಿನಕ್ಕಷ್ಟೇ ಆಚರಣೆ ಮಾಡೊದು ಬೇಡ, ನಿಜವಾದ ಸ್ನೇಹ ಇದ್ರೆ ಪ್ರತಿದಿನವೂ  ಫ್ರೆಂಡ್ಸ್ ಶಿಪ್ ಡೇನೇ ಅಲ್ವಾ?

-ಸೌಮ್ಯ ಕಾರ್ಕಳ
ಸ್ನಾತಕೋತ್ತರ ಪ್ರತಿಕೋದ್ಯಮ ವಿಭಾಗ, ಆಳ್ವಾಸ್ ಕಾಲೇಜು ಮೂಡಬಿದ್ರೆ