ಮಣಿಪಾಲ: ಇಲ್ಲಿನ ಮಂಚಿ ಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಶೆಫಿನ್ಸ್ ಎಜುಕೇಶನಲ್ ಅಂಡ್ ಚಾರಿಟೇಬಲ್ಟ್ರಸ್ಟ್ ಇವರು ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದಡಿಯಲ್ಲಿ ನಡೆಸುತ್ತಿರುವ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ಉದ್ಘಾಟಿಸಲಾಯಿತು.
ವರ್ಷಾಂತ್ಯದವರೆಗೆ ನಡೆಯಲಿರುವ ಈ ತರಬೇತಿಯನ್ನು ರೋಟರಿ ಮಣಿಪಾಲವು ಪ್ರಾಯೋಜಿಸುತ್ತಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಮಣಿಪಾಲದ ಅಧ್ಯಕ್ಷ ರೊ. ಶ್ರೀಪತಿ ಮಾತನಾಡಿ ತಾವು ಹತ್ತು ವರ್ಷದ ಮೊದಲು ಇದೇ ಶಾಲೆಯ ಆವರಣದಲ್ಲಿ ನೆಟ್ಟು ಇದೀಗ ತುಂಬ ಫಲ ಕೊಡುತ್ತಿರುವ ತೆಂಗಿನ ಮರವನ್ನು ಉದಾಹರಿಸಿ, ಸ್ಪೋಕನ್ ಇಂಗ್ಲಿಷ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಮುಂದಿನ 10 ವರ್ಷಗಳಲ್ಲಿ ಉನ್ನತ ಹುದ್ದೆಗಳಲ್ಲಿಇರುವುದನ್ನು ಕಾಣಬಯಸುವ ತಮ್ಮ ಕನಸನ್ನು ವಿದ್ಯಾರ್ಥಿಗಳೆದುರು ತೆರೆದಿಟ್ಟರು.
ಮುಖ್ಯ ಅತಿಥಿ ಶೆಫಿನ್ಸ್ ನಿರ್ದೇಶಕ ಮನೋಜ್ ಕಡಬ ಮಾತನಾಡಿ, ಇತ್ತೀಚಿನ ಪತ್ರಿಕಾ ವರದಿಗಳ ಪ್ರಕಾರ ಉಡುಪಿ ಮತ್ತು ದಕ ಜಿಲ್ಲೆಗಳಲ್ಲಿ 55 ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗಿರುತ್ತದೆ. ಕರ್ನಾಟಕ ಸರಕಾರದ ಮಾಜಿ ಸಚಿವರೋರ್ವರು ಸುಳ್ಯದಲ್ಲಿ ನಡೆದ ಸಮಾರಂಭವೊಂದರಲ್ಲಿ ಮುಂದಿನ 5 ವರ್ಷಗಳಲ್ಲಿ 10,000ಕ್ಕಿಂತ ಹೆಚ್ಚು ಶಾಲೆಗಳು ಮುಚ್ಚುವ ಭೀತಿಯನ್ನು ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿ, ತಾವು ಮಾಡುತ್ತಿರುವ ಆಂದೋಲನದಿಂದಾಗಿ ಸಾಲ ಮಾಡಿ ಆಂಗ್ಲಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರು ಮುಂದಿನ ವರ್ಷಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಾಗಿ, ಆ ಮೂಲಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿ, ಕನ್ನಡ ಮಾಧ್ಯಮ ಶಾಲೆಗಳು ಉಳಿಯುವಂತಾಗಲೆಂದು ಆಶಿಸಿದರು.
ಸಮಾರಂಭದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ನ ಚಟುವಟಿಕಾ ಪುಸ್ತಕಗಳನ್ನು ವಿತರಿಸಲಾಯಿತು. ಮಕ್ಕಳು ಆಂಗ್ಲಭಾಷೆಯಲ್ಲಿ ತಾವು ಕಲಿತ ಟಂಟ್ ಟ್ವಿಸ್ಟರ್, ಪದ್ಯ ಹಾಗೂ ಸಂಭಾಷಣೆಯನ್ನು ಪ್ರದರ್ಶಿಸಿದರು.
ಸಮಾರಂಭದಲ್ಲಿ ಶಾಲಾಮುಖ್ಯೋಪಾಧ್ಯಾಯಿನಿ ಆಶಾಲತ, ರೋಟರಿ ಕಾರ್ಯದರ್ಶಿ ರೊ| ಶ್ರೀಕಾಂತ್ ಪ್ರಭು, ಜತೆ ಕಾರ್ಯದರ್ಶಿ ರೊ| ಫರೀದಾ, ಹಿರಿಯ ಸದಸ್ಯೆ ರೊ| ಶೈಲಾರಾವ್, ರೊ| ನಾಗರಾಜ್ ಶೆಟ್ಟಿ, ರೊ| ರಾಜವರ್ಮ ಆರಿಗ, ರೊ| ಶಶಿಕಲಾ ರಾಜವರ್ಮ, ಶೆಫಿನ್ಸ್ ನ ಇಜಾಜ್ ಮನ್ನ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಜಯಂತಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಚಂದ್ರಿಕಾ, ಶಾಲಾ ಶಿಕ್ಷಕಿಯರಾದ ಸುಮಾ ಹಾಗೂ ಪೂರ್ಣಿಮಾ, ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಶೆಫಿನ್ಸ್ ನಿಂದ ತರಬೇತಾದ ಅತಿಥಿ ಶಿಕ್ಷಕ ಗೌರೀಶ್ ಗೌಡ ಕಾರ್ಯಕ್ರಮ ಸಂಯೋಜಿಸಿ, ವನಿತಾ ಸ್ವಾಗತಿಸಿದರು. ಶೆಫಿನ್ಸ್ ಸಂಯೋಜಕಿ ಅರ್ಪಿತಾ ಬ್ರಹ್ಮಾವರ ವಂದಿಸಿದರು.