ಉಡುಪಿ: ಶೆಫಿನ್ಸ್ ಸಂಸ್ಥೆಯ ‌ವತಿಯಿಂದ ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿ

ಉಡುಪಿ: ಮಣಿಪಾಲ ಶೆಫಿನ್ಸ್‌ ಸಂಸ್ಥೆ ವತಿಯಿಂದ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಹಾಗೂ ಪದವೀಧರ ಮಹಿಳೆಯರಿಗೆ ಉಚಿತ ಸ್ಪೋಕನ್‌ ಇಂಗ್ಲಿಷ್‌ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಮನೋಜ್‌ ಕಡಬ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಒಂದು ಲಕ್ಷ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ಹಾಗೂ 2 ಸಾವಿರ ಪದವೀಧರ ಮಹಿಳೆಯರಿಗೆ ಸ್ಪೋಕನ್‌ ಇಂಗ್ಲಿಷ್‌ ತರಬೇತಿ ನೀಡುವ ಗುರಿ ಹೊಂದಲಾಗಿದ್ದು, ಶಾಲೆಯ ಗೌರವ
ಶಿಕ್ಷಕಿಯರು ಸೇರಿದಂತೆ ಪದವೀಧರ ಮಹಿಳೆಯರಿಗೆ ಪ್ರಥಮ ಹಂತವಾಗಿ ಅಕ್ಟೋಬರ್‌ 14ರಿಂದ 18ರ ವರೆಗೆ ಉಡುಪಿಯಲ್ಲಿ ತರಬೇತಿ ನೀಡಲಾಗುವುದು ಎಂದರು.

ತರಬೇತಿ, ಯೋಜನಾ ವೆಚ್ಚ ಹೊರತುಪಡಿಸಿ ಮಕ್ಕಳಿಗೆ ನೀಡಲಾಗುವ ಪುಸ್ತಕ, ಪ್ರಮಾಣ ಪತ್ರ ಹಾಗೂ ಮಹಿಳೆಯರ ತರಬೇತಿ ವೆಚ್ಚ ಸೇರಿದಂತೆ ವರ್ಷಕ್ಕೆ ತಲಾ ವಿದ್ಯಾರ್ಥಿಗೆ 150 ರೂ. ಖರ್ಚು ತಗಲಲಿದ್ದು, ಅದನ್ನು ಸಂಘ ಸಂಸ್ಥೆಗಳ ಮೂಲಕ ಭರಿಸಲು ನಿರ್ಧರಿಸಲಾಗಿದೆ. ಈಗಾಗಲೇ 10ರಿಂದ 15 ಶಾಲೆಗಳು ತರಬೇತಿ ಪಡೆಯಲು ನೋಂದಣಿ ಮಾಡಿಕೊಂಡಿವೆ. ಈ ಯೋಜನೆಯನ್ನು ಉಡುಪಿಯಲ್ಲಿ ಆರಂಭಿಸಿ ರಾಜ್ಯದಾದ್ಯಂತ ವಿಸ್ತರಿಸುವ ಚಿಂತನೆ ಇದೆ ಎಂದರು.

ತರಬೇತಿ ಪಡೆಯುವ ಪದವೀಧರರು ತಮ್ಮ ಮನೆಯ ಸುತ್ತಮುತ್ತಲಿನ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್‌ ಕಲಿಸಿಕೊಡಬೇಕು. ಈ ಯೋಜನೆಯನ್ನು ಜಾರಿಗೊಳಿಸಲು ಶಾಲೆಯೇ ಆಗಬೇಕಿಂದಿಲ್ಲ, ಯುವಕ ಯುವತಿ ಮಂಡಳಿ, ಸ್ವಸಹಾಯ ಗುಂಪು, ಕಾಲೊನಿಗಳಲ್ಲಿಯೂ ಆಯೋಜಿಸಲು ಸಾಧ್ಯವಿದೆ. ಅದಕ್ಕೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದು ತಿಳಿಸಿದರು.

ಮೊದಲ ಬ್ಯಾಚ್‌ನಲ್ಲಿ ತರಬೇತಿ ಪಡೆಯಲು ಆಸಕ್ತರಿರುವ ಮಹಿಳೆಯರು ಅ. 10ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್‌ ಸಂಖ್ಯೆ 90084
18534, 94483 68305 ಅಥವಾ ವೆಬ್‌ಸೈಟ್‌ (www.shefins.com) ಸಂಪರ್ಕಿಸಬಹುದು
ಎಂದು ಮಾಹಿತಿ ನೀಡಿದರು.  ಗೋಷ್ಠಿಯಲ್ಲಿ ಸಂಸ್ಥೆಯ ಸಹ ನಿರ್ದೇಶಕಿ ಶೆರ್ಲಿ ಮನೋಜ್‌, ಯೋಜನಾ ಸಂಯೋಜಕಿ ಜಸ್ನಾ ಸುಧೀಶ್‌ ಉಪಸ್ಥಿತರಿದ್ದರು.