ಮಣಿಪಾಲ: ಮಾಹೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ| ರಾಮದಾಸ್ ಪೈ ಅವರ 90ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಸಹಯೋಗದಲ್ಲಿ ಯಕ್ಷ ಗಾನ ಮೇಳಗಳ ಕಲಾವಿದರಿಗೆ ಉಚಿತ ಮಣಿ ಪಾಲ ಆರೋಗ್ಯ ಕಾರ್ಡ್ ಸೌಲಭ್ಯ ವಿಸ್ತರಿಸಲಾಗಿದೆ.
ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿ, ಯಕ್ಷಗಾನ ಪರಂಪರೆಯ ಸಂರಕ್ಷಣೆ ಮತ್ತು ವಿಸ್ತರಣೆಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿಯವರ ಮನವಿಗೆ ಸ್ಪಂದಿಸಿ ಸಮುದಾಯ ಆರೋಗ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಮೇಲಿನ ತನ್ನ ನಿರಂತರ ಬದ್ಧತೆಯ ಭಾಗವಾಗಿ ಮಾಹೆ ವಿ.ವಿ. ಮಣಿಪಾಲ ಆರೋಗ್ಯ ಕಾರ್ಡ್‌ಗಳ ಉಚಿತ ವಿತರಣೆ ಕಾರ್ಯಕ್ರಮ ವಿ.ವಿ.ಯಲ್ಲಿ ನಡೆಯಿತು.
ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ಯಕ್ಷಗಾನ ಕಲಾವಿದರು ನಮ್ಮ ಸಾಂಸ್ಕೃತಿಕ ಪರಂಪರೆಯ ರಕ್ಷಕರು. ಅವರಿಗೆ ಸಮಯೋಚಿತ ಹಾಗೂ ಕೈಗೆಟಕುವ ಆರೋಗ್ಯ ಸೇವೆ ಅತ್ಯಂತ ಅಗತ್ಯ. ಮಣಿಪಾಲ ಆರೋಗ್ಯ ಕಾರ್ಡ್ ಮೂಲಕ ಕಲಾವಿದರು ಹಾಗೂ ಅವರ ಕುಟುಂಬಕ್ಕೆ ವೈದ್ಯಕೀಯ ವೆಚ್ಚದ ಭಾರವನ್ನು ಕಡಿಮೆ ಮಾಡಲು ಮಾಹೆ ಸಂತೋಷದಿಂದ ನೆರವಾಗುತ್ತಿದೆ. ಅವರನ್ನು ಗುರುತಿಸಿ ಬೆಂಬಲಿಸುವಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಪ್ರಯತ್ನ ಶ್ಲಾಘನೀಯ ಎಂದರು.ಪಂಚ ಮೇಳಗಳ ಯಜಮಾನ ಪಿ. ಕಿಶನ್ ಹೆಗ್ಡೆ ಅವರು, ಆರೋಗ್ಯ ಕಾರ್ಡ್ ಕಲಾವಿದರ ಕುಟುಂಬ ಗಳಿಗೆ ನೆಮ್ಮದಿ ನೀಡಲಿದೆ. ಹೆಚ್ಚಿನ ವೆಚ್ಚದ ಭಯವಿಲ್ಲದೆ ವೈದ್ಯಕೀಯ ಚಿಕಿತ್ಸೆ ಪಡೆಯಬಹುದಾದ ವಿಶ್ವಾಸವನ್ನು ಈ ಕಾರ್ಡ್ ನೀಡುತ್ತದೆ ಎಂದು ತಿಳಿಸಿದರು.
ತೆಂಕು-ಬಡಗಿನ 37 ಮೇಳಗಳ 810 ಕಲಾವಿದರು ಮತ್ತು 2,350 ಕುಟುಂಬ ಸದಸ್ಯರು ಈ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಮಾಹೆ ವಿ.ವಿ. ಸಹಕುಲಪತಿ ಡಾ| ನಾರಾಯಣ ಸಭಾಹಿತ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಅವಿನಾಶ್ ಶೆಟ್ಟಿ, ಡಾ| ಸುಧಾಕರ ಕಂಟಿಪುಡಿ, ಮೇಳಗಳ ಯಜಮಾನರು, ಪ್ರತಿನಿಧಿಗಳು, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಕಾರ್ಯಕರ್ತರು ಉಪಸ್ಥಿತರಿದ್ದರು.
















