ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ವತಿಯಿಂದ ವೃದ್ಧಾಶ್ರಮಕ್ಕೆ ಉಚಿತವಾಗಿ ಮಾರ್ಗಫಲಕ ಅಳವಡಿಕೆ

ಕಟಪಾಡಿ: ಇಲ್ಲಿನ ಅಗ್ರಹಾರ ಏಣಗುಡ್ಡೆ ಎಂಬಲ್ಲಿ “ಕಾರುಣ್ಯ” ವೃದ್ಧರ ಆಶ್ರಮ/ಅನಾಥರ ಆಶ್ರಮವಿದ್ದು ಇದನ್ನು ಕುಮಾರ್ ದಂಪತಿಗಳು ಸೇವಾರೂಪದಲ್ಲಿ ಕಳೆದ ಎಂಟು ವರ್ಷದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಹದಿಮೂರು ಜನರಿಗೆ ಉಚಿತವಾಗಿ ವಸತಿ ಕಲ್ಪಿಸಲಾಗಿದ್ದು ನಿರ್ಗತಿಕ ವೃದ್ಧರು ಆಶ್ರಯ ಪಡೆದಿದ್ದಾರೆ. ಸ್ವಂತ ಮಕ್ಕಳೇ ವೃದ್ಧ ತಂದೆತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವಂತಹ ಇಂದಿನ ದಿನಗಳಲ್ಲಿ ಸ್ವಂತ ಖರ್ಚಲ್ಲಿ ಇಂತಹ ಸಮಾಜಸೇವೆಯನ್ನು ಸಲ್ಲಿಸುತ್ತಿರುವ ಕುಮಾರ್ ದಂಪತಿಗಳ ಕಾರ್ಯ ಅಭಿನಂದನಾರ್ಹವಾಗಿದೆ. ಕಾರುಣ್ಯ ಆಶ್ರಮವು ಕಟಪಾಡಿ ಪೇಟೆಯಿಂದ ಮೂರು ಕಿಲೋಮೀಟರ್ ದೂರದಲ್ಲಿದ್ದು ಜನರಿಗೆ ಈ ಆಶ್ರಮಕ್ಕೆ ಹೋಗಲು ಮಾರ್ಗ ತಿಳಿಯುವುದು ಕಷ್ಟವಾಗಿತ್ತು. ಇದನ್ನು ಗಮನಿಸಿ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯು ಈ ಆಶ್ರಮಕ್ಕೆ ನಾಲ್ಕು ಕಡೆಗಳಲ್ಲಿ ಮಾರ್ಗಫಲಕವನ್ನು ಸೇವಾ ರೂಪಾದಲ್ಲಿ ಉಚಿತವಾಗಿ ಹಾಕಿಕೊಡುತ್ತಿದೆ. ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಈ ಸೇವಾ ಕಾರ್ಯವನ್ನು ಕಟಪಾಡಿಯ ನಾಗರಿಕರು ಪ್ರಶಂಸಿಸಿದ್ದಾರೆ.

ಈ ಸಂದರ್ಭದಲ್ಲಿ ವಿನಾಯಕ್ ರಾವ್ ಅಧ್ಯಕ್ಷರು ಸೇವಾಧಾಮ ಕನ್ಯಾಡಿ, ಚಂದ್ರಚಿತ್ರ ಕಡೇಕಾರ್, ಮತ್ತಿತರರು ಉಪಸ್ಥಿತರಿದ್ದರು.