ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ, ಮಾಹಿತಿ ಶಿಬಿರ

ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ, ಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ ವಿಭಾಗ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ (ಮಂಗಳೂರು) ಉಡುಪಿ, ಆದರ್ಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಡುಪಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ, ಪ್ರಸಾದ್ ನೇತ್ರಾಲಯ ಉಡುಪಿ, ದಂತ ವೈದ್ಯಕೀಯ ವಿಭಾಗ ಕೆ.ಎಂ.ಸಿ ಮಣಿಪಾಲ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳಲಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರ ಕಾರ್ಯಕ್ರಮವು “ಆರೋಗ್ಯಕ್ಕಾಗಿ ಒಟ್ಟಾಗಿ ವಿಜ್ಜಾನದೊಂದಿಗೆ ನಿಲ್ಲೋಣ” ಎಂಬ ಘೋಷ ವಾಕ್ಯದೊಂದಿಗೆ ಮಂಗಳವಾರ, ಊಪ್ಪರು ಡೈರಿಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ನಿಯಮಿತ ಮಂಗಳೂರು ಉಡುಪಿ ಇದರ ಅಧ್ಯಕ್ಷ ಕೊಡವೂರು ರವಿರಾಜ ಹೆಗ್ಡೆ ಮಾತನಾಡಿ, ಪ್ರತಿಯೊಬ್ಬರೂ ಗುಣಮಟ್ಟದ ಆಹಾರ ಸೇವನೆ ಮತ್ತು ಸ್ವಚ್ಛತೆಯತ್ತ ಹೆಚ್ಚು ಗಮನಹರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದ ಅವರು, ಜನಸಾಮಾನ್ಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಪ್ರತಿವರ್ಷವೂ ಸಹ ಆರೋಗ್ಯ ಶಿಬಿರಗಳನ್ನು ಆಯೊಜಿಸಿ, ಅವರುಗಳ ಆರೋಗ್ಯ ರಕ್ಷಣೆ ಮಾಡಬೇಕು ಎಂದರು.

ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಕಾರ್ಯಕ್ರಮಗಳ ಅಧಿಕಾರಿ ಡಾ.ಲತಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, “ಆರೋಗ್ಯಾಕ್ಕಾಗಿ ಒಟ್ಟಾಗಿ ವಿಜ್ಞಾನದೊಂದಿಗೆ ನಿಲ್ಲೋಣ” ಎಂಬ ಘೋಷವಾಕ್ಯದೊಂದಿಗೆ ವಿಶ್ವ ಆರೋಗ್ಯ ದಿನವನ್ನು ಆರೋಗ್ಯ ಜಾಗೃತಿ ಮತ್ತು ವಿವಿಧ ರೀತಿಯ ಆರೋಗ್ಯ ತಪಾಸಣೆ ನಡೆಸುವುದರ ಮೂಲಕ ಅರ್ಥ ಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘ ಕರಾವಳಿ ಉಡುಪಿ ಕಾರ್ಯದರ್ಶಿ ಡಾ.ಮಾನಸ್ ಮಾತನಾಡಿ, ವಿಶ್ವ ಆರೋಗ್ಯ ದಿನಾಚರಣೆ ಕೇವಲ ಆಚರಣೆ ಆಗಬಾರದು ದೈಹಿಕ ಆರೋಗ್ಯದ ಜೊತೆಗೆ ಸಂಗೀತ, ವ್ಯಾಯಾಮ, ಕಲೆ, ಕರಕುಶಲ ಚಟುವಟಿಕೆಗಳ ಮೂಲಕ ಒತ್ತಡ ರಹಿತ ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಬೇಕು ಎಂದರು. ಜಿಲ್ಲಾ ಸರ್ಜನ್ ಡಾ.ಹೆಚ್.ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಸದಾ ಗಮನ ಹರಿಸಬೇಕು. ಮಕ್ಕಳು ಮೊಬೈಲ್ ಅನ್ನು ಹೆಚ್ಚು ಬಳಕೆ ಮಾಡದಂತೆ ಎಚ್ಚರವಹಿಸಬೇಕು. ಯೋಗ, ಧ್ಯಾನ, ಪ್ರಾಣಾಯಾಮ, ಹೊರಾಂಗಣ ಕ್ರೀಡೆಗಳಲ್ಲಿ ಮಕ್ಕಳನ್ನು ತೊಡಗಿಸಬೇಕು. ಇದು ಉತ್ತಮ ಆರೋಗ್ಯಕ್ಕೆ ಪೂರಕ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಹಾಲು ಒಕ್ಕೂಟದ ಉಪಾಧ್ಯಕ್ಷ ಉದಯ್ ಎಸ್ ಕೋಟ್ಯಾನ್, ಆದರ್ಶ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ.ಅನಂತ ಎಸ್ ಮಠದ್, ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ. ಆಶಿಕ್, ಕೆ.ಎಂ.ಸಿ ಮಣಿಪಾಲದ ದಂತ ವೈದ್ಯಕೀಯ ವಿಭಾಗಪಬ್ಲಿಕ್ ಹೆಲ್ತ್ ಡೆಂಟಿಸ್ಟಿç ಡಾ.ಪೂಜಾ, ಕೊಳಲಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್ ನಾಯಕ್, ಆಪ್ತ ಸಮಾಲೋಚಕ ಮನು ಎಸ್.ಬಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಡಾ.ಅಂಜಲಿ ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ನಿರೂಪಿಸಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಶಶಿಧರ್ ಜೈನ್ ವಂದಿಸಿದರು. ಸುಮಾರು 220 ಮಂದಿ ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.