ಮೈಸೂರು: ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು ನವೆಂಬರ್ನಿಂದ ಪೂರೈಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದಾರೆ.
ಅವರು ಮಂಗಳವಾರ ಮೈಸೂರಿನಲ್ಲಿ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲೆಗಳಲ್ಲಿ ಮುಕ್ತವಾಗಿ ಎಲ್ಲಾ ವ್ಯವಸ್ಥೆ ಬಳಸಿಕೊಳ್ಳಬಹುದು. ಹಲವು ಶಾಲೆಗಳಿಗೆ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ, ಉಚಿತವಾಗಿ ವಿದ್ಯುತ್ ಹಾಗೂ ನೀರು ನೀಡಿದರೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ಅನುಕೂಲವಾಗಲಿದೆ. ಶಾಲೆಗಳು ವಿದ್ಯುತ್ ಬಿಲ್ಗೆ ಹೆದರಿ ಕಂಪ್ಯೂಟರ್ ಬಳಸುತ್ತಿಲ್ಲ. ಇದೀಗ ಇದೆಲ್ಲಕ್ಕೂ ಸಹಾಯವಾಗಲಿದೆ ಎಂದರು.
ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಹಾಲಿನಲ್ಲಿ ರಾಗಿ ಮಾಲ್ಟ್ ಕೊಡುತ್ತೇವೆ. ಕ್ಷೀರ ಭಾಗ್ಯ ಹಾಲಿನಲ್ಲಿ ರಾಗಿ ಮಾಲ್ಟ್ ಹಾಕಿ ಮೈಸೂರಿನ ಸಿಎಫ್ಟಿಆರ್ಐನಲ್ಲಿ ಟೆಸ್ಟ್ ಮಾಡಿಸುತ್ತಿದ್ದೇವೆ. ಮಕ್ಕಳ ಪೌಷ್ಟಿಕಾಂಶ ಜಾಸ್ತಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.