ಫ್ರೀ ಬಸ್ ಆಯ್ತು; ಇದೀಗ ಬಂತು ಫ್ರೀ ಟ್ರೈನ್!

ಹೈದರಾಬಾದ್: ತೆಲಂಗಾಣ ಸಂಸ್ಥಾಪನ ದಿನ ಉಡುಗೊರೆಯಾಗಿ ಜೂನ್ ಎರಡರಿಂದ ಒಂದು ವರ್ಷದ ಕಾಲ ಪ್ರಯೋಗಾತ್ಮಕವಾಗಿ ಹೈದರಾಬಾದ್ ನಿವಾಸಿಗಳಿಗೆ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಮತ್ತೊಂದು ಗ್ಯಾರಂಟಿ ನೀಡಲು ಮುಂದಾಗಿದ್ದು, ಸರ್ಕಾರದ ಎಂಎಂಟಿಸ್ ರೈಲುಗಳಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲು ಸಿದ್ಧತೆ ನಡೆಸಿದೆ. ಈ ಕುರಿತು ದಕ್ಷಿಣ ಮಧ್ಯ ರೈಲ್ವೆ(ಎಸ್​​ಸಿಆರ್​)ಗೆ ಸರ್ಕಾರ ಪ್ರಸ್ತಾವನೆ ಮಾಡಿ ಪತ್ರವನ್ನು ಬರೆದಿದ್ದು, ರೈಲ್ವೆ ಬೋರ್ಡ್ ಅನುಮತಿ ಲಭ್ಯವಾದ ಕೂಡಲೇ ಈ ಯೋಜನೆ ಜಾರಿ ಆಗುವುದು ಖಚಿತ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಈನಾಡು ವರದಿ ಮಾಡಿದೆ.

ಯೋಜನೆಗೆ ಸಿಎಂ ರೇವಂತ್ ರೆಡ್ಡಿ ಗ್ರೀನ್ ಸಿಗ್ನಲ್ ನೀಡಿದ್ದು, ಮಾರ್ಚ್ 26ರಂದು ಎಂಎಂಟಿಎಸ್ ರೈಲು ಬಗ್ಗೆ ಸಮೀಕ್ಷೆ ನಡೆಸಿ ಕ್ರಮಕೈಗೊಂಡಿದ್ದಾರಂತೆ. ಏಪ್ರಿಲ್ 16ರಂದು ರೈಲು ನಿಲಯದಲ್ಲಿ ನಡೆದ ಸಭೆಯಲ್ಲಿ ತೆಲಂಗಾಣ ಮುಖ್ಯ ಕಾರ್ಯದರ್ಶಿ ರಾಮಕೃಷ್ಣ ರಾವ್ ಅವರು ದಕ್ಷಿಣ ಮಧ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜಯ್ ಕುಮಾರ್ ಶ್ರೀವಾಸ್ತವ ಅವರನ್ನು ಭೇಟಿಯಾಗಿದ್ದರು. ಈ ಸಭೆಯು ರೈಲ್ವೆ ಮತ್ತು ರಾಜ್ಯ ಸರ್ಕಾರಗಳ ನಡುವಿನ ಮೊದಲ ಸಮನ್ವಯ ಸಭೆಯಾಗಿದೆ.

ಈ ಯೋಜನೆ ಜಾರಿಯಾದರೆ, ಹಲವು ಪ್ರದೇಶಗಳ ಕಾರ್ಮಿಕ ವರ್ಗ, ಮಧ್ಯಮ ವರ್ಗದವರಿಗೆ ಆರ್ಥಿಕವಾಗಿ ಅನುಕೂಲವಾಗುವುದಲ್ಲದೇ ಪೀಕ್ ಅವರ್ ಗಳಲ್ಲಿ ಉಂಟಾಗುವ ವಾಹನ ದಟ್ಟಣೆಯನ್ನೂ ತಡೆಗಟ್ಟಬಹುದು ಎಂಬುದಾಗಿ ಚಿಂತಿಸಲಾಗಿದೆ.