ಮಣಿಪಾಲ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆರೋಗ್ಯ ವಿಜ್ಞಾನ, ಬ್ಯಾಂಕಿಂಗ್ ಮತ್ತು ಕೃಷಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಲ್ಕು ಮಂದಿ ಸಾಧಕರಿಗೆ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್ ಎಜುಕೇಶನ್ ಆ್ಯಂಡ್ ಮಣಿಪಾಲ್ ಗ್ರೂಪ್ ಇಂಡಿಯ, ಪ್ರೈ. ಲಿ., ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿ. ಮತ್ತು ಡಾ. ಟಿಎಂಎ ಪೈ ಫೌಂಡೇಶನ್ ಸಂಸ್ಥೆಗಳ ವತಿಯಿಂದ ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿವ್ಯೂನಲ್ಲಿ ಜ. 14 ರಂದು ‘ಹೊಸವರ್ಷದ ಪ್ರಶಸ್ತಿ-2023’ ಪ್ರದಾನ ಮಾಡಿ ಗೌರವಿಸಲಾಯಿತು.
38 ವರ್ಷಗಳ ಕಾಲ ಬ್ಯಾಂಕಿಂಗ್ ನಿರ್ವಹಣೆ ಮತ್ತು ಆಡಳಿತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾಬಲೇಶ್ವರ ಎಂ. ಎಸ್, ಮಕ್ಕಳ ಶುಶ್ರೂಷೆ ಮತ್ತು ತಜ್ಞ ವೈದ್ಯೆಯಾಗಿ ಸಮಾಜ ಸೇವಾಭಾವದಲ್ಲಿ ಶ್ರಮಿಸಿ ಹೆಸರು ಪಡೆದ ಡಾ. ಪುಷ್ಪಾ ಕಿಣಿ, ಮೂಳೆ ಚಿಕಿತ್ಸಕರಾಗಿ ಮತ್ತು ಕೆಎಂಸಿಯ ಡೀನ್ ಆಗಿ ಆಡಳಿತಾತ್ಮಕ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಡಾ, ಪಿ. ಶ್ರೀಪತಿ ರಾವ್ ಮತ್ತು ಕೃಷಿ ಕ್ಷೇತ್ರದ ಸಾಧಕರಾಗಿ ಪದ್ಮಶ್ರೀ ಪುರಸ್ಕೃತರಾದ ಅಮೈ ಮಹಾಲಿಂಗ ನಾಯ್ಕ ಇವರು ಹೊಸವರ್ಷದ ಪ್ರಶಸ್ತಿ-2023 ಪುರಸ್ಕೃತರಾದ ಸಾಧಕರಾಗಿದ್ದಾರೆ.
ಎಂಇಎಜಿ, ಮಾಹೆಯ ಅಧ್ಯಕ್ಷ ಹಾಗೂ ಎಜಿಇಯ ರಿಜಿಸ್ಟ್ರಾರ್ ಡಾ. ರಂಜನ್ ಆರ್. ಪೈ ಮಾತನಾಡಿ, ಸ್ವಸ್ಥ
ಸಮಾಜ ರೂಪುಗೊಳ್ಳಬೇಕಾದರೆ ಆರೋಗ್ಯ ವಿಜ್ಞಾನ ಕ್ಷೇತ್ರದ ಕೊಡುಗೆ ಅಗತ್ಯ. ಇಂದಿನ ಪ್ರಶಸ್ತಿ ಪುರಸ್ಕೃತರಲ್ಲಿ
ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಶ್ರಮವಹಿಸಿದವರು ಇದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಆರ್ಥಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದವರೂ ಇದ್ದಾರೆ, ಗ್ರಾಮದಲ್ಲಿದ್ದುಕೊಂಡು ಇಡೀದೇಶವೇ ಗಮನಿಸುವಂಥ ಸಾಧನೆಯನ್ನು ಮಾಡಿದ ಕೃಷಿಕರನ್ನು ಇಂದು ಸನ್ಮಾನಿಸಿದ್ದೇವೆ. ಈ ಸಮಾರಂಭವು ನಮ್ಮ ಬಳಗದ ಸಂಸ್ಥೆಗಳು ಸಮಾಜದ ಸಮಗ್ರ ಅಭಿವೃದ್ಧಿಯ ಬದ್ಧತೆಯನ್ನು ಇರಿಸಿಕೊಂಡು ಕಾರ್ಯನಿರ್ವಹಿಸುತ್ತವೆ ಎಂಬುದರ ಸಾಕ್ಷಿಯಾಗಿದೆ ಎಂದರು.
ಮಾಹೆಯ ಸಹಕುಲಾದಿಫತಿ ಮತ್ತು ಎಜಿಇಯ ಅಧ್ಯಕ್ಷ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಮಾನವೀಯ ಕಳಕಳಿಯನ್ನು ಮತ್ತು ಸಾಮಾಜಿಕ ಬದ್ಧತೆಯನ್ನು ಎತ್ತಿಹಿಡಿಯುವುದು ನಮ್ಮ ಆಶಯ. ಹಾಗಾಗಿ, ಸಮಾಜಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ ವಿವಿಧ ಕ್ಷೇತ್ರಗಳ ಸಾಧಕರಿಗೆ ಹೊಸವರ್ಷದ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದೇವೆ. ಈ ಮೂಲಕ ಹೊಸವರ್ಷವನ್ನು ಆಚರಣೆಯೂ ಅರ್ಥಪೂರ್ಣವೆನಿಸಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಹಾಬಲೇಶ್ವರ ಎಂ. ಎಸ್. ಮಾತನಾಡಿ, ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಮತ್ತು
ವ್ಯವಸ್ಥಾಪಕ ನಿರ್ದೇಶಕನಾಗಿ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತ ಬಂದಿದ್ದೇನೆ. ಈಗ ಮಣಿಪಾಲ್ ಸಂಸ್ಥೆಗಳು ನನ್ನ ಸೇವೆಯನ್ನು ಗುರುತಿಸಿ ಸಂಮಾನಿಸಿರುವುದರಿಂದ ನನ್ನ ಸೇವೆಯನ್ನು ಸಮಾಜ ಪರಿಗಣಿಸಿದೆ ಎಂಬ ಸಾರ್ಥಕ ಭಾವ ಉಂಟಾಗಿದೆ. ಆರೋಗ್ಯ, ಶಿಕ್ಷಣ, ಪತ್ರಿಕೆ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದ ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆದ ಮಣಿಪಾಲ ಬಳಗದ ಪ್ರಶಸ್ತಿಯನ್ನು ಸ್ವೀಕರಿಸಿರುವುದರಿಂದ ಧನ್ಯತೆ ಉಂಟಾಗಿದೆ ಮತ್ತು ನನ್ನ ಹೊಣೆಗಾರಿಕೆ ಅಧಿಕವಾಗಿದೆ ಎಂದರು.
ಡಾ. ಪುಷ್ಪಾ ಜಿ. ಕಿಣಿ ಮಾತನಾಡಿ, ನಾನು ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸಿದ ಸಂಸ್ಥೆಯಿಂದಲೇ ಸನ್ಮಾನ
ಸ್ವೀಕರಿಸುವುದಕ್ಕಿಂತ ಹೆಚ್ಚಿನ ಭಾಗ್ಯ ಇನ್ನೊಂದಿಲ್ಲ. ಈ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಸಾಧಿಸಬೇಕು ಎಂಬ ಸ್ಫೂರ್ತಿಯನ್ನು ಪಡೆದಿದ್ದೇನೆ ಎಂದರು.
ಅಮೈ ಮಹಾಲಿಂಗ ನಾಯ್ಕ್ ಮಾತನಾಡಿ, ಕೃಷಿ ಕ್ಷೇತ್ರದ ಅವಗಣನೆಗೆ ಒಳಗಾಗುತ್ತಿದೆ ಎಂದು ಎಲ್ಲರೂ ಬೇಸರಿಸುವ ಸಂದರ್ಭದಲ್ಲಿ ಕೇಂದ್ರ ಸರಕಾರವು ನನಗೆ ‘ಪದ್ಮಶ್ರೀ’ ನೀಡಿ ಗೌರವಿಸಿತು. ಈಗ, ಮಣಿಪಾಲ ಬಳಗವು ನನಗೆ ಹೊಸವರ್ಷದ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ. ರಾಷ್ಟ್ರಪ್ರಶಸ್ತಿಯನ್ನು ಬರಮಾಡಿಕೊಂಡ ಸಂಭ್ರಮದಲ್ಲಿಯೇ ಇದನ್ನು ಕೂಡ ಸ್ವೀಕರಿಸುತ್ತಿದ್ದೇನೆ. ಇದರಿಂದ ಯುವಜನಾಂಗವು ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರೇರಣೆ ದೊರೆತಂತಾಗಿದೆ ಎಂದರು.
ಡಾ. ಪಿ. ಶ್ರೀಪತಿ ರಾವ್ ಮಾತನಾಡಿ, ಪ್ರಶಸ್ತಿಯನ್ನು ಸ್ವೀಕರಿಸುವಾಗ ಸಂತೋಷವಾಗುವುದು ಸಹಜವೇ. ಆದರೆ, ನನಗೆ ಎರಡು ಪಟ್ಟು ಸಂತೋಷವಾಗಿದೆ. ಒಂದು, ಪ್ರಶಸ್ತಿ ಪಡೆಯುವುದು ಸಂಭ್ರಮದ ಸಂಗತಿಯಾದರೆ, ಇವತ್ತು ನಾನು ಏನಾಗಿದ್ದೇನೋ ಆ ಮಟ್ಟವನ್ನು ತಲುಪುವುದಕ್ಕೆ ಆಶ್ರಯ ನೀಡಿದ ಸಂಸ್ಥೆಯೇ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಇನ್ನೊಂದು ಕಾರಣವಾಗಿದೆ. ಇದನ್ನು ನನ್ನ ಜೀವನದ ಕೃತಾರ್ಥ ಕ್ಷಣವೆಂದು ಭಾವಿಸುತ್ತೇನೆ ಎಂದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಎಜಿಇನ ಉಪಾಧ್ಯಕ್ಷ ಟಿ. ಸತೀಶ್ ಯು. ಪೈ, ಡಾ. ಟಿಎಂಎ ಪೈ ಫೌಂಡೇಶನ್ನ ಅಧ್ಯಕ್ಷ ಟಿ. ಅಶೋಕ ಪೈ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.