ಕೈಮಗ್ಗದ ಸೀರೆ ನೇಯುತ್ತಿರುವ ನಾಲ್ಕು ನೇಕಾರರ ಸೇವಾ ಸಹಕಾರ ಸಂಘಗಳಿಗೆ ಜಿಐ ಟ್ಯಾಗ್ ಬಳಸಲು ಅನುಮತಿ

ಉಡುಪಿ/ಮಂಗಳೂರು: ಕೈಮಗ್ಗದ ಸೀರೆಗಳನ್ನು ನೇಯುತ್ತಿರುವ ಕರಾವಳಿ ಭಾಗದಲ್ಲಿ ಇನ್ನೂ ನಾಲ್ಕು ನೇಕಾರರ ಸೇವಾ ಸಹಕಾರ ಸಂಘಗಳು ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಅನ್ನು ಬಳಸಲು ಅಧಿಕೃತ ಪ್ರಮಾಣಪತ್ರವನ್ನು ಪಡೆದಿವೆ. ನಾಲ್ಕು ಸಂಘಗಳ ಸೇರ್ಪಡೆಯೊಂದಿಗೆ ಇದೀಗ ಉಡುಪಿ ಸೀರೆಗೆ ಜಿಐ ಟ್ಯಾಗ್ ಬಳಸಲು ಐದು ನೇಕಾರರ ಸಂಘಗಳಿಗೆ ಅನುಮತಿ ನೀಡಿದಂತಾಗಿದೆ.

ಪಡುಪಣಂಬೂರು ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಲಿಮಿಟೆಡ್, ಹಳೆಯಂಗಡಿ; ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ನಿ., ಉಡುಪಿ; ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ನಿ., ಆದಿ ಉಡುಪಿ ಮತ್ತು ಬ್ರಹ್ಮಾವರ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ನಿ., ಬ್ರಹ್ಮಾವರ ಇವು ಜಿಐ ಟ್ಯಾಗ್ ಪಡೆದ ನಾಲ್ಕು ಸಂಘಗಳು.

ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಲಿ., ಕಿನ್ನಿಗೋಳಿ, ಉಡುಪಿ ಸೀರೆಗೆ ಜಿಐ ಟ್ಯಾಗ್‌ ಪಡೆದ ಮೊದಲ ನೇಕಾರ ಸಂಘವಾಗಿದೆ

ಈ ಐದು ಸೊಸೈಟಿಗಳಲ್ಲಿ ಒಟ್ಟು 63 ನೇಕಾರರಿದ್ದಾರೆ. 2016ರಲ್ಲಿ ಉಡುಪಿ ಸೀರೆಗೆ ಜಿಐ ಟ್ಯಾಗ್ ಸಿಕ್ಕಿದ್ದರೂ, ಉಡುಪಿ ಸೀರೆ ಉತ್ಪಾದಿಸುವ ಯಾವುದೇ ನೇಕಾರರ ಸಹಕಾರ ಸಂಘಗಳು ಜಿಐ ಟ್ಯಾಗ್ ಬಳಕೆಗೆ ಅಧಿಕೃತ ಪ್ರಮಾಣಪತ್ರವನ್ನು ಪಡೆದಿರಲಿಲ್ಲ. 2019 ರಲ್ಲಿ, ಉಡುಪಿ ಕದಿಕೆ ಟ್ರಸ್ಟ್ ಸೀರೆ ಉತ್ಪಾದಿಸುವ ಎಲ್ಲಾ ನೇಕಾರರ ಸಂಘಗಳಿಗೆ ಜಿಐ ಅಧಿಕಾರವನ್ನು ಪಡೆಯಲು ಸಾಧ್ಯವಾಗುವ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಅದರಂತೆ ನಾಲ್ಕು ಸಂಘಗಳಿಗೆ ತಮ್ಮಸೀರೆಗಳಿಗೆ ಜಿಐ ಟ್ಯಾಗ್ ಬಳಸಲು ಅನುಮತಿ ದೊರಕಿದೆ. ಕರಾವಳಿಯ ಐದು ನೇಕಾರ ಸಂಘಗಳಿಗೆ ಜಿಐ ಟ್ಯಾಗ್ ದೊರೆತಿರುವುದು ಉಡುಪಿ ಸೀರೆಗಳಿಗೆ ಹೆಚ್ಚಿನ ಬೇಡಿಕೆ ಬರಲು ಸಹಕಾರಿಯಾಗಲಿದೆ ಎಂದು ಕದಿಕೆ ಟ್ರಸ್ಟ್ ನ ಅಧ್ಯಕ್ಷೆ ಮಮತಾ ರೈ ಹೇಳಿದ್ದಾರೆ.