ಕಡಬ: ಆಲ್ಟೋ ಕಾರು- ಜೀಪ್ ಮುಖಾಮುಖಿ ಡಿಕ್ಕಿ: ನಾಲ್ವರ ಸಾವು; ಹಲವರಿಗೆ ಗಾಯ

ಕಡಬ: ಎರಡು ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ನೆಟ್ಟಣ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಎರಡು ವಾಹನಗಳಲ್ಲಿ ಒಟ್ಟು 20ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಹಾಸನದ ಬೇಲೂರು ತಾಲೂಕಿನ ಟಗರೆ ಮತ್ತು ಚಂದನಹಳ್ಳಿ ನಿವಾಸಿಗಳಾದ ಉಲ್ಲಾಸ್ (28), ಗಣೇಶ್ (26), ತನ್ವಿಕ್ (4) ಮತ್ತು ನೇತ್ರಾವತಿ (28) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಆಲ್ಟೋ ಕಾರು ಮತ್ತು ಜೀಪ್ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದವರು ಹಾಸನದ ಬೇಲೂರು ತಾಲೂಕಿನ ಟಗರೆಯವರು ಮತ್ತು ಎಂಯುವಿಯಲ್ಲಿದ್ದವರು ಬೇಲೂರು ತಾಲೂಕಿನ ಚಂದನಹಳ್ಳಿಯವರು. ಅಪಘಾತದಲ್ಲಿ 20 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತು. ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ.