ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

ಕುಂದಾಪುರ: ಡಿ. 5ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಟ್ರಸ್ಟ್ ನ ಅಧ್ಯಕ್ಷ ಗುರೂಜಿ ಶಾಂತಾರಾಮ್ ಭಂಡಾರ್ಕರ್ ಮಾತನಾಡಿ, ಪ್ರತಿದಿನವು ಇತರರನ್ನು ಗೆಲ್ಲಿಸಿ. ನಿತ್ಯವೂ ಮನೆ ಮನಸು ಕನಸಿನಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಇತರರು ಜಯ ಗಳಿಸಬೇಕು. ನಿಮಗೂ ಬದುಕಿನಲ್ಲಿ ಸಾರ್ಥಕತೆಯ ಅನುಭವವಾಗುತ್ತದೆ. ಆಗ ಜಗತ್ತು ನಿಮ್ಮ ವಶವಾಗುತ್ತದೆ. ಪ್ರತಿ ವರ್ಷ ನಮ್ಮ ತಂದೆಯವರಾದ ಎ.ಎಸ್.ಭಂಡಾರ್ಕಾರ್ ಅವರ ಸಂಸ್ಮರಣೆ ಮಾಡುವ ನಿಮಗೆ ಚಿರುಋಣಿ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾನಕಿ ಶ್ರೀಕಾಂತ್ ಸಿಂಗಾಪುರ ಇವರು ಮಾತನಾಡಿ, ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ವರ್ಣನೆಗಳಿಂದ ನಮ್ಮ ಸಾಧನೆಯ ಕುರಿತು ಸರಿಯಾದ ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತದೆ. ಉದಾತ್ತ ಗುಣ ಮತ್ತು ಆಲೋಚನೆಗಳಿಂದ ನಮ್ಮ ವ್ಯಕ್ತಿತ್ವದ ಸಬಲೀಕರಣವಾಗುತ್ತದೆ. ನಾವು ತಿಳಿದ ಮತ್ತು ಕಲಿತ ವಿಷಯದ ಕುರಿತು ಸದಾ ಮನನ ಮಾಡಬೇಕು. ಆಗ ನಮ್ಮ ಸಾಧನೆಯ ಹಾದಿ ಸುಗಮವಾಗುತ್ತದೆ. ಸರಿಯಾದ ರೀತಿಯಲ್ಲಿ ಯಾವುದೇ ವಿಷಯದ ಕುರಿತು ಕಾರ್ಯಾಶೀಲರಾಗಬಹುದು ಎಂದರು.

ಪ್ರತಿವರ್ಷದಂತೆ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ನಡೆಸುವ ಅಂತರ್ ಕಾಲೇಜು ಸಂಗೀತ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ವರ್ಷ ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜು ಸಮಗ್ರ ಪ್ರಶಸ್ತಿ ಪಡೆದು ಡಾ. ಎ.ಎಸ್. ಭಂಡಾರ್ಕರ್ ಪರ್ಯಾಯ ಫಲಕವನ್ನು ಪಡೆಯಿತು. ಮಂಗಳೂರಿನ ಎಂ.ಆರ್.ಪಿ.ಎಲ್ ಅವರು ನಡೆಸಿದ ಹಿಂದಿ ಭಾಷಣ ಸ್ಪರ್ಧೆ ವಿಜೇತರನ್ನು ಗುರುತಿಸಲಾಯಿತು.

ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯ ಕೆ. ಶಾಂತಾರಾಮ್ ಪ್ರಭು, ಕೆ.ದೇವದಾಸ್ ಕಾಮತ್, ಯು.ಎಸ್.ಶೆಣೈ, ಪ್ರಜ್ಞೇಶ್ ಪ್ರಭು, ಗುರೂಜಿ ಶಾಂತಾರಾಮ್ ಆಶ್ರಮದ ಸಂಯೋಜಕ ಶ್ರೀನಿವಾಸನ್ ಉಪಸ್ಥಿತರಿದ್ದರು.

ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರಾಚಾರಿ ಸ್ವಾಗತಿಸಿದರು. ಉಪನ್ಯಾಸಕಿ ಪ್ರಿಯಾ ರೆಗೊ ಅತಿಥಿಗಳನ್ನು ಪರಿಚಯಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ.ಗೊಂಡ ವಂದಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಅರುಣ್.ಎ.ಎಸ್ ನಿರೂಪಿಸಿದರು. ಲಲಿತಕಲಾ ಸಂಘದ ಸಂಯೋಜಕ ಶಶಾಂಕ್ ಪಟೇಲ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.