ಮುಂಬೈ ತುಂಗಾ ಆಸ್ಪತ್ರೆಯ ಸ್ಥಾಪಕ, ಕಂಬಳ ಪ್ರೇಮಿ ಮಧ್ವಗುತ್ತು ಭೋಜ ಮೋಹನ್ ಶೆಟ್ಟಿ ವಿಧಿವಶ

ಮುಂಬೈ: ಮುಂಬೈ ತುಂಗಾ ಆಸ್ಪತ್ರೆಗಳ ಸ್ಥಾಪಕ, ಕಂಬಳ ಪ್ರೇಮಿ ಮಧ್ವಗುತ್ತು ಭೋಜ ಮೋಹನ್ ಶೆಟ್ಟಿ(72) ಅವರು ಆ. 31ರಂದು ನಿಧನ ಹೊಂದಿದರು.
ಮೃತರು ಪತ್ನಿ ವಸಂತಿ ಭೋಜ ಶೆಟ್ಟಿ (ಬೈಲು ಶೆಟ್ಟಿಪಾಲು ಕೊಳಂಬೆ) ಮಕ್ಕಳಾದ ಹರಿಪ್ರಸಾದ್ ಶೆಟ್ಟಿ, ರಾಜೇಶ್ ಶೆಟ್ಟಿ, ಡಾ, ಸತೀಶ್ ಶೆಟ್ಟಿ, ಪೂಜಾ ಉಮೇಶ್ ಶೆಟ್ಟಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಭೋಜ ಶೆಟ್ಟಿ ಮೂಲತಃ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಮಾಲಾಡಿ ಹೊಸಮನೆಯವರು.
ಮಡಂತ್ಯಾರು ವಲಯದ ಬಂಟರ ಸಂಘವನ್ನು ಸ್ಥಾಪಿಸಿ ಅದರ ಸ್ಥಾಪಕ ಗೌರವ ಅಧ್ಯಕ್ಷರಾಗಿದ್ದರು. ಜತೆಗೆ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳದಲ್ಲಿ ಬಹಳಷ್ಟು ಆಸಕ್ತಿ ಹೊಂದಿದವರಾಗಿದ್ದರು. ಎರಡು ಜೊತೆ ಕಂಬಳದ  ಕೋಣಗಳನ್ನು ಸಾಕಿ, ಪ್ರತಿಯೊಂದು ಕಂಬಳ ಕ್ರೀಡೆಯಲ್ಲಿ ಭಾಗವಹಿಸಿದ್ದರು.
ಅವರ ನಿಧನಕ್ಕೆ ಜಾಗತಿಕ ಬಂಟರ ಸಂಘದ ಒಕ್ಕೂಟಗಳ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ, ಜವಾಬ್ ಅಧ್ಯಕ್ಷ  ಐ ಆರ್ ಶೆಟ್ಟಿ, ಉದ್ಯಮಿ ಬಿ ಆರ್ ಪೂಂಜಾ ಸಂತಾಪ ಸೂಚಿಸಿದ್ದಾರೆ.