ಕಾರ್ಕಳ: ಶಿಕ್ಷಣ ನಮಗೆ ಜ್ಞಾನ, ಧೈರ್ಯ, ಮಾರ್ಗದರ್ಶನ, ನೌಕರಿಯನ್ನು ನೀಡುತ್ತದೆ. ಆದರೆ ಇಂದು ವಿದ್ಯಾರ್ಥಿಗಳು ತಮ್ಮ ಪೋಷಕ, ಶಿಕ್ಷಕರನ್ನು ಗೌರವಿಸದಿರುವುದು ವಿಷಾದನೀಯ ಸಂಗತಿ ಎಂದು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ನುಡಿದರು.
ಅವರು ಗಣಿತನಗರದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ನಡೆದ, ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಂಸ್ಥಾಪಕ ಗೋಪಶೆಟ್ಟಿಯವರ ಜನ್ಮಶತಾಬ್ದಿ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೀವನ ಮೌಲ್ಯಗಳನ್ನು ಸಮಗ್ರವಾಗಿ ಅಳವಡಿಸಿಕೊಂಡು ಜೀವನದ ಸಮಗ್ರ ಅಭಿವೃದ್ದಿಯ ಕನಸು ಕಾಣಲು, ಜ್ಞಾನಸುಧಾ ಶಿಕ್ಷಣ ಸಂಸ್ಥೆ ಇಲ್ಲಿನ ವಿದ್ಯಾರ್ಥಿಗಳಿಗೆ ಕೇವಲ ಶೈಕ್ಷಣಿಕ ಬೋಧನೆಯ ಮೂಲಕ ಅಂಕಗಳಿಕೆಗೆ ಸೀಮಿತಗೊಳಿಸದೆ, ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಹರ್ಷದಾಯಕ ಸಂಗತಿ. ಮುಂದೆಯೂ ಅನೇಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಜ್ಞಾನಸುಧಾ ಪ್ರತಿ ವರ್ಷ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಸಂಸ್ಥಾಪಕ ಜನ್ಮದಿನವನ್ನು ಆಚರಿಸುತ್ತಿರುವುದು ಶ್ಲಾಘನೀಯ ಸಂಗತಿ. ರಕ್ತವೆಂಬುದು ದೇಹದ ಅವಿಭಾಜ್ಯ ಅಂಗ, ರಕ್ತವಿಲ್ಲದೆ ದೇಹವಿಲ್ಲ, ದೇಹವಿಲ್ಲದೆ ಜೀವವಿಲ್ಲ, ರಕ್ತದಾನದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಜೀವಗಳನ್ನು ಉಳಿಸಲು ಸಾದ್ಯವಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕಾರ್ಕಳದ ಹಿರಿಯ ವೈದ್ಯ ಡಾ. ಕೆ.ರಾಮಚಂದ್ರ ಜೋಷಿ ಅವರು ಹೇಳಿದರು.
ಸಂಸ್ಥಾಪಕರು ಬಯಸಿದ ಸಮಾಜ ಸೇವೆ, ಶ್ರದ್ದೆ, ಪ್ರಾಮಾಣಿಕತೆ, ಕರ್ತವ್ಯ ಇದೆಲ್ಲವನ್ನು ಅವರ ಮಗ ಡಾ.ಸುಧಾಕರ ಶೆಟ್ಟಿಯವರು ಈ ಸಂಸ್ಥೆಯ ಮೂಲಕ ಕಾರ್ಯರೂಪ ಗೊಳಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ನಿವೃತ್ತ ಮುಖ್ಯೋಪಾದ್ಯಾಯಿನಿ ಸಿಸ್ಟರ್ ಕ್ರಿಸ್ಟೆಲ್ಲ ಹೇಳಿದರು.
ಇದೇ ಸಂದರ್ಭ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 600ಕ್ಕಿಂತ ಹೆಚ್ಚು ಅಂಕ ಗಳಿಸಿದ 17 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಕಾರ್ಕಳದ ಸಮಾಜ ಸೇವಕಿ ಆಯೇಷಾ ಇವರನ್ನು ಸನ್ಮಾನಿಸಲಾಯಿತು.
ಕುಕ್ಕುಂದೂರು ಹಾಗೂ ಅಜೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ದಿವ್ಯಾಂಗಿಗಳಿಗೆ ಗಾಲಿಕುರ್ಚಿಯನ್ನು ನೀಡಿ ವಿತರಿಸಲಾಯಿತು. ಸಂಸ್ಥೆಯ ನಿವೃತ್ತ ಉದ್ಯೋಗಿಗಳಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು. ದಿ.ಗೋಪ ಶೆಟ್ಟಿಯವರೊಂದಿಗೆ ಕೃಷಿಕಾಯಕದಲ್ಲಿ ತೊಡಗಿದ್ದ 7 ಜನ ಒಡನಾಡಿಗಳನ್ನು ಗುರುತಿಸಿಲಾಯಿತು. ರಕ್ತದಾನ ಶಿಬಿರದ ಮೂಲಕ ಉಡುಪಿಯ ಅಜ್ಜರಕಾಡಿನ ರಕ್ತನಿಧಿಗೆ 110 ಯುನಿಟ್ ರಕ್ತವನ್ನು ಸಂಗ್ರಹಿಸಿ ನೀಡಲಾಯಿತು.
ವೇದಿಕೆಯಲ್ಲಿ ಎನ್.ಐ.ಟಿ.ಕೆ ಸುರತ್ಕಲ್‌ನ ಪ್ರೊ.ಎಸ್.ಎನ್‌ಹೆಗ್ಡೆ, ಎ.ಪಿ.ಜಿ.ಇ.ಟಿ ಆಡಳಿತ ಮಂಡಳಿ ಸದಸ್ಯ ಶ್ರೀ ಶಾಂತಿರಾಜ್ ಹೆಗ್ಡೆ, ಗೋಪ ಶೆಟ್ಟಿಯವರ ಹಿರಿಯ ಪುತ್ರ ಶ್ರೀ ಪ್ರಭಾಕರ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಕುಣಾಕರ್ ಶೆಟ್ಟಿ, ವಿದ್ಯಾವತಿ ಎಸ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ಉಭಯ ಸಂಸ್ಥೆಗಳ ಪ್ರಾಂಶುಪಾಲರುಗಳು, ಉಪಪ್ರಾಂಶುಪಾಲರುಗಳು, ಪಿ.ಆರ್.ಒ, ಡೀನ್ಸ್ ಉಪಸ್ಥಿತರಿದ್ದರು
ಸಂಸ್ಥೆಯ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು. ಉಪನ್ಯಾಸಕ ಪ್ರಜ್ವಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.