ಉಡುಪಿ: 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಸಂಭವಿಸುವ ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆಗಸ್ಟ್ 1 ರಿಂದ 15 ರ ವರೆಗೆ ರಾಷ್ಟ್ರೀಯ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ 5 ವರ್ಷದೊಳಗಿನ ಒಟ್ಟು 69,881 ಮಕ್ಕಳಿದ್ದು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇವರ ಮನೆಗಳಿಗೆ ತೆರಳಿ ಓ.ಆರ್.ಎಸ್ ಪ್ಯಾಕೆಟ್ ವಿತರಣೆ ಮಾಡುವ ಮೂಲಕ ಇವುಗಳ ಬಳಕೆಯ ಕುರಿತು ಮಾಹಿತಿ ನೀಡಲಿದ್ದಾರೆ. ಆರೋಗ್ಯ ಸಂಸ್ಥೆಗಳಲ್ಲಿ ಮತ್ತು ಉಪಕೇಂದ್ರಗಳಲ್ಲಿ ಓ.ಆರ್.ಎಸ್ ಹಾಗೂ ಜಿಂಕ್ ಕಾರ್ನರ್ ರಚಿಸಿ, ಅತಿಸಾರ ಭೇದಿ ಪ್ರಕರಣಗಳಿಗೆ ಚಿಕಿತ್ಸೆ ಲಭ್ಯವಿದ್ದು, ತೀವ್ರ ನಿರ್ಜಲೀಕರಣ ಇರುವ ಪ್ರಕರಣಗಳಿಗೆ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಬಹುದಾಗಿದೆ.
ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ನಗರಸಭೆ ಹಾಗೂ ಇತರ ಇಲಾಖೆಯ ಸಹಯೋಗದಲ್ಲಿ ನಡೆಸಲಾಗುವ ಈ ಕಾರ್ಯಕ್ರಮಕ್ಕೆ ಆ. 1 ರಂದು ಬೆಳಗ್ಗೆ 10 ಗಂಟೆಗೆ ನಗರದ ಸರ್ಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.