ವಾಷಿಂಗ್ಟನ್ (ಅಮೆರಿಕ): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2023ರ ನಂತರ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಸ್ವಲ್ಪ ಸಮಯದವರೆಗೆ ಕ್ರಿಕೆಟ್‌ನಿಂದ ಕಾಣೆಯಾಗಿರುವ ಅವರು ರಜಾದಿನಗಳನ್ನು ವಿವಿಧ ಸ್ಥಳಗಳಲ್ಲಿ ಸುತ್ತಾಡುತ್ತಾ ಸಂಭ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲ, ಧೋನಿ ಎಲ್ಲಿಗೆ ಹೋದರೂ ಅಪಾರ ಪ್ರೀತಿಯೂ ಸಿಗುತ್ತಿದೆ.
ಕುತೂಹಲದ ಬೆಳವಣಿಗೆಯಲ್ಲಿ ಧೋನಿಗೆ ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಮಾನಿಯಾಗಿದ್ದಾರೆ. ಧೋನಿ ಅಮೆರಿಕದಲ್ಲಿ ಇರುವುದನ್ನು ತಿಳಿದ ಟ್ರಂಪ್ ಗಾಲ್ಫ್ ಆಟಕ್ಕೆ ಆತಿಥ್ಯ ನೀಡಿದ್ದಾರೆ.
ಇತ್ತೀಚೆಗೆ ಯುಎಸ್ ಓಪನ್ 2023 ಕ್ವಾರ್ಟರ್ ಫೈನಲ್ ಟೆನಿಸ್ ಪಂದ್ಯ ಕಾರ್ಲೋಸ್ ಅಲ್ಕರಾಜ್ ಮತ್ತು ಜ್ವೆರೆವ್ ನಡುವೆ ನಡೆದಿದೆ. ಈ ಪಂದ್ಯದಲ್ಲಿ ಸ್ಪೇನ್‌ನ ಅಲ್ಕರಾಜ್ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪಂದ್ಯ ವೀಕ್ಷಿಸಲು ಧೋನಿ ಕೂಡ ಬಂದಿದ್ದರು. ಈ ಪಂದ್ಯಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಧೋನಿ ಕಾಣಿಸಿಕೊಂಡಿದ್ದಾರೆ.
ಐಪಿಎಲ್ 2023ರಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಪ್ರಶಸ್ತಿ ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ ದಾಖಲೆ ಸರಿಗಟ್ಟಿದೆ. ಮಾಹಿ ನಾಯಕತ್ವದಲ್ಲಿ ಸಿಎಸ್‌ಕೆ ತನ್ನೆಲ್ಲಾ ಪ್ರಶಸ್ತಿಗಳನ್ನೂ ಗೆದ್ದಿದೆ. ಧೋನಿ ತಮ್ಮ ಕೊನೆಯ ಐಪಿಎಲ್ ಆಡುತ್ತಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಫೈನಲ್ ನಂತರ ಮಾಹಿ ಫಿಟ್ ಆಗಿ ಉಳಿದರೆ, ಐಪಿಎಲ್ 2024ರಲ್ಲೂ ಆಡುವುದು ಖಚಿತ ಎಂದು ಹೇಳಿದ್ದರು.
ಧೋನಿ ವೃತ್ತಿಜೀವನ: ಭಾರತಕ್ಕಾಗಿ 90 ಟೆಸ್ಟ್, 350 ಏಕದಿನ ಮತ್ತು 98 ಟಿ20 ಪಂದ್ಯಗಳನ್ನು ಧೋನಿ ಆಡಿದ್ದಾರೆ. ಟೆಸ್ಟ್‌ನಲ್ಲಿ 4,876 ರನ್, ಏಕದಿನದಲ್ಲಿ 10,773 ರನ್ ಮತ್ತು ಟಿ20 ಯಲ್ಲಿ 1,617 ರನ್ ಗಳಿಸಿದ್ದಾರೆ.
ಟ್ರಂಪ್ ಆಹ್ವಾನದ ಮೇರೆಗೆ ಧೋನಿ ಗಾಲ್ಫ್ ಆಡಲು ತೆರಳಿದ್ದಾರೆ. ಧೋನಿ ಮತ್ತು ಟ್ರಂಪ್ ಇಬ್ಬರೂ ಒಂದಷ್ಟು ಹೊತ್ತು ಗಾಲ್ಫ್ ಆಡಿ ಟೈಮ್ ಪಾಸ್ ಮಾಡಿದ್ದಾರೆ. ಧೋನಿ ಜತೆ ಆತ್ಮೀಯವಾಗಿ ಮಾತನಾಡಿದ ಟ್ರಂಪ್, ಕ್ರಿಕೆಟ್ ಬಗ್ಗೆ ಹರಟಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿವೆ