ಬೆಂಗಳೂರು : ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ, ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ದಂಪತಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.ಸಿಎಂ ಸಿದ್ದರಾಮಯ್ಯ ಅವರನ್ನು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ರಾಜಕೀಯೇತರವಾಗಿ ಇಂದು ಭೇಟಿಯಾದರು.
2022ರಲ್ಲಿ ಬೆಂಗಳೂರಿಗೆ ಬಂದಿದ್ದ ಮಣಿಶಂಕರ್ ಅಯ್ಯರ್ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಸಿದ್ದರಾಮಯ್ಯ ಮೊದಲ ಅವಧಿಯ ಸರ್ಕಾರವನ್ನು ನೇರವಾಗಿ ಟೀಕಿಸಿದ್ದರು. 2013-18 ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಆಗ ಪಂಚಾಯತ್ ರಾಜ್ ಕಾನೂನುಗಳನ್ನು ಜಾರಿ ಮಾಡುವಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಹಿಂದೆ ಬಿದ್ದಿತ್ತು ಎಂದು ಆರೋಪಿಸಿದ್ದರು. ನಿರೀಕ್ಷಿತ ವೇಗದಲ್ಲಿ ಕೆಲಸ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಈಗ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಮೊದಲ ಅವಧಿಯ ಸರ್ಕಾರವನ್ನು ಟೀಕಿಸಿದ್ದ ಅಯ್ಯರ್ ಈಗ ಸಿದ್ದರಾಮಯ್ಯರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಮಣಿಶಂಕರ್ ಅಯ್ಯರ್ ದಂಪತಿಯನ್ನು ಸಿದ್ದರಾಮಯ್ಯ ಸ್ವಾಗತಿಸಿದರು. ಪರಸ್ಪರರನ್ನು ಅಭಿನಂದಿಸಿಕೊಂಡರು. ಕೆಲ ಸಮಯ ಆತ್ಮೀಯವಾಗಿ ಮಾತುಕತೆ ನಡೆಸಿದರು. ಇದೊಂದು ಖಾಸಗಿ ಭೇಟಿಯಾಗಿದ್ದು ರಾಜಕೀಯ ವಿಚಾರದ ಕುರಿತು ಚರ್ಚೆ ನಡೆಸಿಲ್ಲ ಎನ್ನಲಾಗಿದೆ.