ನವದೆಹಲಿ: ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಜಸ್ವಂತ್ ಸಿಂಗ್ (82) ಇಂದು ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಜಸ್ವಂತ್ ಸಿಂಗ್ ಅವರು ಜೂನ್ 25 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಹುಅಂಗಾಂಗ ವೈಫಲ್ಯದಿಂದ ಬಳಸುತ್ತಿದ್ದ ಅವರಿಗೆ, ತಲೆಯಲ್ಲಿನ ಗಾಯವು ತೀವ್ರ ಸ್ವರೂಪ ಪಡೆದಿತ್ತು. ಇಂದು ಬೆಳಿಗ್ಗೆ ಅವರಿಗೆ ಹೃದಯ ಸ್ತಂಭನವಾಗಿ ಕೊನೆಯುಸಿರೆಳೆದರು ಎಂದು ದೆಹಲಿಯ ಸೇನಾ ಆಸ್ಪತ್ರೆ ತಿಳಿಸಿದೆ.
ರಾಜಸ್ಥಾನ ಮೂಲದ ಜಸ್ವಂತ್ ಸಿಂಗ್ ಅವರು ಭಾರತದ ವಿದೇಶಾಂಗ ಇಲಾಖೆ, ರಕ್ಷಣಾ ಇಲಾಖೆ ಮತ್ತು ಹಣಕಾಸು ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1950 ಮತ್ತು 60 ರ ದಶಕಗಳಲ್ಲಿ ಭಾರತೀಯ ಸೈನ್ಯದಲ್ಲಿ ಅಧಿಕಾರಿಯಾಗಿದ್ದ ಅವರು ನಂತರ ರಾಜಕೀಯ ಸೇರ್ಪಡೆಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ ಜಸ್ವಂತ್ ಸಿಂಗ್ ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.