ಆಂಧ್ರಪ್ರದೇಶದ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಎಸ್. ಅಬ್ದುಲ್ ನಜೀರ್ ನೇಮಕ

ನವದೆಹಲಿ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಎಸ್ ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ. ನ್ಯಾಯಮೂರ್ತಿ ನಜೀರ್ ಜನವರಿ 4 ರಂದು ನಿವೃತ್ತರಾದರು. ಅವರು ಐತಿಹಾಸಿಕ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪಿನ ಭಾಗವಾಗಿದ್ದರು. ಆಂಧ್ರಪ್ರದೇಶದ ಹಾಲಿ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಅವಿಭಜಿತ ದ.ಕ ಜಿಲ್ಲೆಯ ಮೂಡಬಿದ್ರೆಯ ಬೆಳುವಾಯಿಯಲ್ಲಿ ಜಸ್ಟಿಸ್ ನಜೀರ್ ಅವರು ಜನವರಿ 5, 1958 ರಂದು ಜನಿಸಿದರು ಮತ್ತು ಫೆಬ್ರವರಿ 18, 1983 ರಂದು ವಕೀಲರಾಗಿ ನೋಂದಾಯಿಸಿಕೊಂಡರು. ಕರ್ನಾಟಕ ಹೈಕೋರ್ಟ್‌ನಲ್ಲಿ ಕಾನೂನು ಅಭ್ಯಾಸ ಮಾಡಿ ಮೇ 12, 2003 ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ನ್ಯಾಯಮೂರ್ತಿ ನಜೀರ್ ಅವರನ್ನು ಕರ್ನಾಟಕ ಹೈಕೋರ್ಟ್‌ನಿಂದ ಫೆಬ್ರವರಿ 2017 ರಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಿಸಲಾಯಿತು.

ನ್ಯಾಯಮೂರ್ತಿ ಅಬ್ದುಲ್ ನಜೀರ್ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಎಲ್ಲರೊಂದಿಗೆ ಬೆರೆಯುವ ಸ್ವಭಾವದವರಾಗಿದ್ದಾರೆ. ಕೆ.ಎಸ್.ಪುಟ್ಟಸ್ವಾಮಿ ಪ್ರಕರಣ, ತ್ರಿವಳಿ ತಲಾಖ್ ಪ್ರಕರಣ, ನೋಟು ರದ್ದತಿ ಪ್ರಕರಣ ಮುಂತಾದ ಮಹತ್ವದ ಪ್ರಕರಣಗಳಲ್ಲಿ ತೀರ್ಪಿತ್ತ ಪೀಠದ ಭಾಗವಾಗಿದ್ದಾರೆ.

ಈ ಹಿಂದೆ, 2014 ರಲ್ಲಿ ಕೇರಳದ ರಾಜ್ಯಪಾಲರಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಪಿ ಸದಾಶಿವಂ, 1992 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾದ ನಂತರ ಫಾತಿಮಾ ಬೀವಿ 1997-2001ರ ಅವಧಿವರೆಗೆ ತಮಿಳುನಾಡಿನ ರಾಜ್ಯಪಾಲರಾಗಿ ನೇಮಕಗೊಂಡಿದ್ದರು.