ನವದೆಹಲಿ: ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಅಮರಿಂದರ್ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಬಿಜೆಪಿ ಸೇರ್ಪಡೆಯಾಗುತ್ತಾರಾ? ಅನ್ನೋ ಪ್ರಶ್ನೆಗೆ ಈ ಭೇಟಿ ಮತ್ತಷ್ಟು ಪುಷ್ಠಿ ಸಿಕ್ಕಂತೆ ಆಗಿದೆ.
ಈ ಹಿಂದೆ ನವಜೋತ್ ಸಿಂಗ್ ಸಿಧು ಜಟಾಪಟಿಯಿಂದ ಅಮರಿಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕ್ಯಾಪ್ಟನ್ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಚರಣ್‍ಜಿತ್ ಸಿಂಗ್ ಚನ್ನಿಯವರನ್ನ ಆಯ್ಕೆ ಮಾಡಿತ್ತು. ಕೆಲ ದಿನಗಳ ಹಿಂದೆಯೂ ಸಂಪುಟ ವಿಸ್ತರಣೆ ಮಾಡೋದರ ಜೊತೆಗೆ ಕ್ಯಾಪ್ಟನ್ ಆಪ್ತರಿಗೆ ಕ್ಯಾಬಿನೆಟ್ ನಿಂದ ಕೊಕ್ ನೀಡಲಾಗಿತ್ತು.
ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಇವರ ಮುಂದಿನ ಆಯ್ಕೆ ಬಿಜೆಪಿ ಎಂದು ಹೇಳಲಾಗಿತ್ತು. ತನ್ನ 52 ವರ್ಷದ ರಾಜಕೀಯ ಜೀವನದಲ್ಲಿ ಅಮರೀಂದರ್ ಸಿಂಗ್, ಬರೋಬ್ಬರಿ 10 ವರ್ಷಗಳ ಕಾಲ ಸಿಎಂ ಆಗಿದ್ದವರು. ಹೀಗಾಗಿ ಅವರದ್ದೇ ಆಪ್ತ ಬಣ ಹೊಂದಿದ್ದಾರೆ.
ಕೇಂದ್ರ ಕೃಷಿ ಸಚಿವ ಸ್ಥಾನ?:
ಅಮರಿಂದರ್ ಸಿಂಗ್ ಅವರನ್ನು ಕೇಂದ್ರ ಕೃಷಿ ಸಚಿವರನ್ನಾಗಿ ಮಾಡಲು ಬಿಜೆಪಿ ಹೈಕಮಾಂಡ್ ಚಿಂತಿಸಿದೆ ಎನ್ನಲಾಗಿದೆ. ಮೊದಲೇ ಕೃಷಿ ಕಾಯ್ದೆ ಸಂಕಷ್ಟದಲ್ಲಿ ಸಿಲುಕಿರುವ ಬಿಜೆಪಿ, ಪಂಜಾಬ್ ಮಾಜಿ ಸಿಎಂ ಅವರನ್ನು ಕೃಷಿ ಸಚಿವರನ್ನಾಗಿ ಮಾಡಿ ಮುಂದಿನ ಚುನಾವಣೆ ಗೆಲ್ಲಲು ಪ್ಲಾನ್ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.

















