ಕೈ ಗೆ ಬೈ ಬೈ ಎಂದ ಪ್ರಮೋದ್ ಮಧ್ವರಾಜ್: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಮಾಜಿ ಸಚಿವ

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೇ 7 ಶನಿವಾರದಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅಧಿಕೃತವಾಗಿ ರಾಜೀನಾಮೆ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

”ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯಲು ಮತ್ತು ಇತ್ತೀಚೆಗೆ ನನಗೆ ನೀಡಲಾದ ಹೊಸ ಹುದ್ದೆಗೆ ನ್ಯಾಯ ಒದಗಿಸಲು ಅಸಾಧ್ಯವಾಗುವ ಹಂತಕ್ಕೆ ತಲುಪಿದ್ದೇನೆ. ಹೀಗಾಗಿ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನವನ್ನು ಸ್ವೀಕರಿಸದಿರಲು ಹಾಗೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಕಳೆದ ಮೂರು ವರ್ಷಗಳಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಉಸಿರುಗಟ್ಟುವಿಕೆಗೆ ಕಾರಣವಾದ ಕೆಟ್ಟ ಅನುಭವ ನನಗೆ ಆಗಿದೆ ಮತ್ತು ಈ ಸಂಗತಿಗಳನ್ನು ನಿಮ್ಮ ಗಮನಕ್ಕೆ ತರಲಾಗಿದೆ ಮತ್ತು ನಾನು ಇತರ ಪಕ್ಷದ ಮುಖಂಡರಿಗೆ ಇದನ್ನು ತಿಳಿಸಿದ್ದೇನೆ. ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನನ್ನ ಅಸಮಾಧಾನವನ್ನು ನಿವಾರಿಸಲು ಪಕ್ಷವು ಯಾವುದೇ ಪ್ರಯೋಜನಕಾರಿ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ನಾನು ಗಮನಿಸಿದ್ದೇನೆ” ಎಂದು ಪತ್ರದಲ್ಲಿ ಉಲ್ಲೇಖಿಸಿದಾರೆ.