ಉಡುಪಿ: ಉಡುಪಿ ನಗರ ವ್ಯಾಪ್ತಿಯ ನಿವೇಶನ ಸಂತ್ರಸ್ತರು ಇಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಭೇಟಿಯಾಗಿ ನಿವೇಶನ ಖರೀದಿಯಲ್ಲಿ ಆಗಿರುವ ಕಾನೂನು ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಎರಡು ದಶಕಗಳ ಹಿಂದೆ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆಯದೆ ಪರಿವರ್ತಿತ ಜಮೀನಿನಲ್ಲಿ ನಿವೇಶನಗಳನ್ನು ಸರ್ಕಾರದ ನೋಂದಣಿ ಪ್ರಕ್ರಿಯೆಯ ಪ್ರಕಾರ ಖರೀದಿಸಿದ್ದು, ಇಂದು ಆ ನಿವೇಶನಗಳಲ್ಲಿ ಮನೆಕಟ್ಟಲಾಗದೆ ಜನರು ಅನೇಕ ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇವರ ನಿವೇಶನಗಳನ್ನು 2010-13ರಲ್ಲಿ ಅಕ್ರಮವೆಂದು ಘೋಷಿಸಿ ಸಕ್ರಮಗೊಳಿಸಲು ಸರ್ಕಾರ ‘ಕರ್ನಾಟಕ ನಗರ ಹಾಗೂ ಗ್ರಾಮೀಣ ಯೋಜನೆ’ (ಅನಧಿಕೃತ ನಿವೇಶನಗಳನ್ನು ಸಕ್ರಮ ಗೊಳಿಸುವ) ನಿಯಮಗಳನ್ನು 2012ರಲ್ಲಿ ಅನುಷ್ಟಾನ ಮಾಡಿತ್ತು.
ಆದರೆ ದುರಾದೃಷ್ಟವಶಾತ್ ಆ ಕಾನೂನನ್ನು ಕೆಲವರು ಪಿಐಎಲ್ ಮುಖಾಂತರ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ನೀವೇಶನ ಖರೀದಿಮಾಡಿದ ಜನರು ಸುಮಾರು 4 ವರ್ಷಗಳಿಂದ ತೀರ್ಪಿಗೆ ಕಾಯುತ್ತಿದ್ದಾರೆ. ಸರಕಾರ ಸೂಕ್ತ ಕ್ರಮ ಕೈಗೊಂಡು ಕಾನೂನಿನ ತೊಡಕನ್ನು ನಿವಾರಿಸಲು ಪ್ರಯತ್ನಿಸಿಲ್ಲ ಎಂದು ಸಂತ್ರಸ್ತರು ಮಾಜಿ ಸಚಿವರ ಬಳಿ ಅಳಲು ತೋಡಿಕೊಂಡರು.
ಉಡುಪಿ ನಗರಾಭಿವೃದ್ಧಿಯ ಪ್ರಾಧಿಕಾರದಲ್ಲಿ ಬರುವ ಈ ನಿವೇಶನಗಳ ಮಾರಾಟ- ಖರೀದಿಯ ನೊಂದಣಿ ಪ್ರಕ್ರಿಯೆ ಹಾಗೂ ವಸತಿ ನಿರ್ಮಾಣ ಕಾರ್ಯ ಸ್ಥಗಿತಗೊಂಡು ಹಲವು ವರ್ಷಗಳು ಕಳೆದಿದೆ. ಅಕ್ರಮ-ಸಕ್ರಮದಡಿಯಲ್ಲಿ ಸುಪ್ರೀಂ ಕೋರ್ಟ್ 2017ರಿಂದಲೂ ಬಗೆ ಹರಿಯದ ದಾವೆಯು ನೆನಗುದಿಗೆ ಬಿದ್ದಿದೆ. ಸಂತ್ರಸ್ಥರ ಹಿತದೃಷ್ಟಿಯಿಂದ 4 ವರ್ಷಗಳಿಂದ ತಟ್ಟಸ್ಥವಾಗಿರುವ ಕರ್ನಾಟಕ ಟೌನ್ ಆ್ಯಂಡ್ ಕಂಟ್ರಿ ರೂಲ್ಸ್ 2012ರ ಮೇಲಿರುವ ಎಸ್ ಎಲ್ ಪಿ ಅನ್ನು ಶೀಘ್ರ ವಿಚಾರಣೆ ಮಾಡಿಸಲು ಬೇಕಾದ ಕ್ರಮದ ಬಗ್ಗೆ ಪ್ರಯತ್ನಪಡಬೇಕು ಎಂದು ಮನವಿಯಲ್ಲಿ ಕೋರಿಕೊಂಡಿದ್ದಾರೆ.
ಮನವಿ ಸ್ವೀಕರಿಸಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಸುಪ್ರಿಂ ಕೋರ್ಟ್‌ನಲ್ಲಿ ಸಂತ್ರಸ್ತರ ಪರವಾಗಿ ಖಾಸಗಿ ವಕೀಲರನ್ನು ಇಟ್ಟು ವಾದ ಮಾಡಬೇಕು. ಅಥವಾ ಸರಕಾರದ ವಕೀಲರ ಮೇಲೆ ಒತ್ತಡ ತಂದು ಸರಕಾರವೇ ವಿಶೇಷ ವಕೀಲರ ತಂಡ ನೇಮಿಸಿ ವಾದ ಮಾಡಿ ಸಂತ್ರಸ್ತರ ಪರ ನ್ಯಾಯ ಒದಗಿಸಲು ಪ್ರಯತ್ನಿಸಬೇಕು. ಬೆಂಗಳೂರಿಗೆ ತೆರಳಿ ವಕೀಲರನ್ನು ಸಂಪರ್ಕಿಸಿ ಸಂತ್ರಸ್ತರ ಪರ ಹೋರಾಟ ಮಾಡಲು ಪ್ರಯತ್ನಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
ನಿಯೋಗದಲ್ಲಿ ರಾಬರ್ಟ್ ಡಿಸೋಜ, ತಾರನಾಥ ಹೆಗ್ಡೆ, ಡಾ. ಕಮಲೇಶ್, ಮೆಲ್ವಿನ್ ರೆಗೋ, ವಾಸುದೇವ ಗಡಿಯಾರ್ ಹಾಗೂ ನಿವೇಶನ ಸಂತ್ರಸ್ತರು ಭಾಗವಹಿಸಿದ್ದರು.












