ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಕೆ. ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಇಂದು ಬೆಳಿಗ್ಗೆ 11ಗಂಟೆಗೆ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನೇತೃತ್ವದಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
2019 ರ ಮೇ ತಿಂಗಳಲ್ಲಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರು ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿಹಬ್ಬಿತ್ತು. ಅಲ್ಲದೆ ಹೊಸ ಪಕ್ಷ ಕಟ್ಟುತ್ತಾರೆ ಎಂಬ ಸುದ್ದಿಯು ಕೇಳಿಬಂದಿತ್ತು. ಈಗ ಅವರು ಅಧಿಕೃತವಾಗಿ ಬಿಜೆಪಿ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಮುಂಬರುವ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಉಡುಪಿ ಎಸ್ಪಿಯಾಗಿ ಸೇವೆ:
2011ರ ಐಪಿಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದ ಅಣ್ಣಾಮಲೈ,
2013ರಲ್ಲಿ ಕಾರ್ಕಳ ಎಎಸ್ಪಿಯಾಗಿ, ಬಳಿಕ ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಚಿಕ್ಕಮಗಳೂರಿನಲ್ಲಿ ಸೇವೆಯಲ್ಲಿದ್ದಾಗ ತನ್ನ ಕಾರ್ಯನಿರ್ವಹಣೆಯಿಂದ ಹೆಚ್ಚು ಪ್ರಸಿದ್ಧಿ ಪಡೆದರು. ನಂತರ ಉಡುಪಿಯಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ತನ್ನ ಅಧಿಕಾರ ಅವಧಿಯಲ್ಲಿ ಅವರು ಉಡುಪಿಯಲ್ಲಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಕಾನೂನು ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸುವುದರ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಗುರುತಿಸಿಕೊಂಡಿದ್ದರು. ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ನಿಯಂತ್ರಣ ಹಾಕಿದ್ದರು. ಗಾಂಜಾ, ಮಟ್ಕಾ ದಂಧೆಯನ್ನು ಬುಡಸಮೇತವಾಗಿ ಕಿತ್ತೊಗೆಯಲು ಶ್ರಮಿಸಿದ್ದರು. ಬಳಿಕ ಬೆಂಗಳೂರಿನಲ್ಲಿ ಡಿಸಿಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು. ಕರ್ತವ್ಯದಲ್ಲಿ ಇರುವಾಗಲೇ 2019ರ ಮೇ ತಿಂಗಳಲ್ಲಿ ಕೆಲಸ ರಾಜೀನಾಮೆ ನೀಡಿದ್ದರು. ನಂತರ ತನ್ನ ತವರೂರಿನಲ್ಲಿ ತಮಿಳುನಾಡಿನ ಕರೂರಿನಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದರು.